ಅರಸಿನಮಕ್ಕಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ — “ಅಸಹಾಯಕರ ಬದುಕಿಗೆ ಬೆಳಕು ಬೇಕು” : ಹೇಮಾವತಿ ವಿ. ಹೆಗ್ಗಡೆ

ಶೇರ್ ಮಾಡಿ

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಡ ಕುಟುಂಬದ ಬದುಕಿಗೆ ಬೆಳಕು ತುಂಬುವ ಕಾರ್ಯ ನೆರವೇರಿತು. ವಾತ್ಸಲ್ಯ ಸದಸ್ಯೆ ಜಯಶ್ರೀ ಅವರಿಗಾಗಿ ನಿರ್ಮಿಸಲಾದ ಪೂರ್ಣ ಸೌಕರ್ಯಗಳಿರುವ ವಾತ್ಸಲ್ಯ ಮನೆಯನ್ನು ಹೇಮಾವತಿ ವಿ. ಹೆಗ್ಗಡೆ ಅವರಿಂದ ಹಸ್ತಾಂತರಿಸಲಾಯಿತು.

ಗ್ರಾಮದ ಅಭಿವೃದ್ಧಿಗೆ ಸ್ಥಿರ ಆಧಾರವಾಗಿ ನಿಂತಿರುವ ಈ ಯೋಜನೆ, ವಸತಿ ಸಮಸ್ಯೆಯಿಂದ ಸಂಕಟದಲ್ಲಿದ್ದ ಜಯಶ್ರೀ ಅವರ ಹಳೆಯ ಮನೆಯನ್ನು ಗುರುತಿಸಿ, ಸಂಪೂರ್ಣ ಸುಸಜ್ಜಿತ ಮನೆ ನಿರ್ಮಿಸಿ ಕೊಡಲು ಮುಂದಾಗಿದ್ದು, ಇಂದು ಹೊಸ ಮನೆ ಹಸ್ತಾಂತರದಿಂದ ಕುಟುಂಬಕ್ಕೆ ನೆಮ್ಮದಿ ನೆಲೆ ಒದಗಿಸಿದೆ. ವಾತ್ಸಲ್ಯ ಕಿಟ್ ಸಹ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೇಮಾವತಿ ಹೆಗ್ಗಡೆ ಅವರು, “ಅಸಹಾಯಕರ ಬದುಕಿಗೆ ಬೆಳಕಾಗುವುದು ನಮ್ಮ ಜೀವನದ ಸಾರ್ಥಕತೆ. ಮಕ್ಕಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಪಡೆದಾಗ ಮಾತ್ರ ಭವಿಷ್ಯದಲ್ಲಿ ನಿಜವಾದ ಬಲವಾಗಿ ನಿಲ್ಲುತ್ತಾರೆ. ಜೀವನದಲ್ಲಿ ಇಂದು ಇರುವ ಪರಿಸ್ಥಿತಿಗಳು ನಾಳೆ ಬದಲಾಗುತ್ತವೆ; ಯಶಸ್ಸಿಗಾಗಿ ಕಷ್ಟ–ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು,” ಎಂದು ಹೇಳಿದರು.

ರಾಜ್ಯಾದ್ಯಂತ ಅನೇಕ ಕುಟುಂಬಗಳು ಇನ್ನೂ ಮೂಲ ಸೌಕರ್ಯವಿಲ್ಲದೆ ಬದುಕುತ್ತಿರುವುದನ್ನು ಉಲ್ಲೇಖಿಸಿದ ಅವರು, “ವಾತ್ಸಲ್ಯ ಮನೆಗಳ ನಿರ್ಮಾಣ ಕಾರ್ಯ ರಾಜ್ಯಮಟ್ಟದಲ್ಲಿ ನಿರಂತರವಾಗಿ ನಡೆಯುತ್ತಿದೆ. ಪ್ರತಿಯೊಂದು ಪ್ರದೇಶದ ಸ್ಥಿತಿಗತಿಗಳನ್ನು ಗಮನಿಸಿ ಯೋಜನೆ ನೆರವಿಗೆ ಬರುತ್ತಿದೆ,” ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಹರೀಶ್ ಕೃಷ್ಣ, ಪ್ರಾದೇಶಿಕ ನಿರ್ದೇಶಕ ಜಯರಾಮ್, ಜ್ಞಾನವಿಕಾಸ ವಿಭಾಗದ ನಿರ್ದೇಶಕರು ವಿಠಲ್ ಪೂಜಾರಿ, ದಿನೇಶ್ ಪೂಜಾರಿ, ಯೋಜನಾಧಿಕಾರಿ ಯಶೋಧರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್, ಜನಜಾಗೃತಿ ವೇದಿಕೆ ತಾಲೂಕು ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು, ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರ ವಸಂತ್, ಸೇವಾ ಪ್ರತಿನಿಧಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Leave a Reply

error: Content is protected !!