

ನೆಲ್ಯಾಡಿ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಖಿಲ ಭಾರತ ಹುಲಿ ಗಣತಿ–2026 ರ ಎರಡನೇ ಹಂತದ ಲೈನ್ ಟ್ರಾನ್ಸೆಕ್ಸ್ ಸಮೀಕ್ಷೆ ಸೋಮವಾರದಂದು ಆರಂಭಗೊಂಡಿದ್ದು, ಸಮೀಕ್ಷೆಯ ಮೊದಲ ದಿನವೇ ಸಿಬ್ಬಂದಿ ಸುರಕ್ಷತಾ ಕೊರತೆ ಮತ್ತೊಮ್ಮೆ ಗಂಭೀರವಾಗಿ ತಲೆದೋರಿದೆ. ಮುಗ್ರು ಅರಣ್ಯ ಪ್ರದೇಶದಲ್ಲಿ ಬೆಳಗಿನ ವೇಳೆಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ದಿನಗೂಲಿ ನೌಕರ ಶೇಷಪ್ಪ ಎಂಬವರಿಗೆ ಕಾಡು ಹಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ನಾಲ್ಕು ದಿನಗಳ ಲೈನ್ ಟ್ರಾನ್ಸೆಕ್ಸ್ ಸಮೀಕ್ಷೆ:
ಎರಡನೇ ಹಂತವಾಗಿ ಫೆ.16 ರಿಂದ ನಾಲ್ಕು ದಿನಗಳ ಕಾಲ ಪ್ರತಿ ಅರಣ್ಯ ಬೀಟ್‌ನಲ್ಲಿ ಬೆಳಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಕಿಮೀ ಉದ್ದದ ಮಾರ್ಗದಲ್ಲಿ ಸಮೀಕ್ಷೆ ನಡೆಯುತ್ತಿದೆ. ಈ ಹಂತದಲ್ಲಿ ಜಿಂಕೆ, ಸಾಂಬಾರ್, ಕಾಟಿ, ಕಾಡುಹಂದಿ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ನೇರ ವೀಕ್ಷಣೆ, ಪಾದಚಿಹ್ನೆಗಳು, ವಾಸಸ್ಥಳದ ಸ್ಥಿತಿಗತಿಗಳನ್ನು ದಾಖಲಿಸಲಾಗುತ್ತದೆ.
ಪ್ರಥಮ ಹಂತವೇ ಸವಾಲಿನ ನಡುವೆ ನಡೆದಿತ್ತು:
ಜ.5 ರಂದು ಪ್ರಥಮ ಹಂತ ಆರಂಭಗೊಂಡಾಗ ಸಿಬ್ಬಂದಿ ಕೊರತೆ, ಜೀವ ರಕ್ಷಕ ಸಾಧನಗಳ ಕೊರತೆ, ದಟ್ಟ ಅರಣ್ಯದ ಅಪಾಯ, ಸಂವಹನ ಸಾಧನಗಳ ಅಭಾವ ಇವೆಲ್ಲದಿಂದ ಸಮೀಕ್ಷೆ ಗಂಭೀರ ಸವಾಲಾಗಿ ಪರಿಣಮಿಸಿತ್ತು. 18 ತಂಡಗಳನ್ನು ರಚಿಸಿ ಪ್ರತಿಯೊಂದು ತಂಡಕ್ಕೆ ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಬೆಳಿಗ್ಗೆ 6ರಿಂದ ಮಧ್ಯಾಹ್ನವರೆಗೂ 5 ಕಿಮೀಗೂ ಹೆಚ್ಚಿನ ದೂರ ಕಾಲ್ನಡಿಗೆಯಲ್ಲಿ ಸಂಚರಿಸಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ಮೂರು ದಿನ ನಡೆದ ಈ ಹಂತದಲ್ಲಿ ಹುಲಿ, ಚಿರತೆ, ಕಾಡು ನಾಯಿ, ನರಿ, ತೋಳ, ಆನೆ ಮತ್ತಿತರ ಕಾಡುಪ್ರಾಣಿಗಳ ಹೆಜ್ಜೆಗುರುತುಗಳು, ಲದ್ದಿ, ಸ್ಕ್ರಾಚ್ ಮಾರ್ಕ್‌ಗಳು ದಾಖಲಿಸಲ್ಪಟ್ಟಿದ್ದವು.
ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿದ್ದರೂ, ರಕ್ಷಣಾ ವ್ಯವಸ್ಥೆ ಕುರಿತು ಸರ್ಕಾರ ಯಾವುದೇ ಸ್ಪಂದನೆ ತೋರಿಸಿರಲಿಲ್ಲ ಎಂಬುದು ಅರಣ್ಯ ಸಿಬ್ಬಂದಿಯ ಆಕ್ಷೇಪ. ಎಚ್ಚರಿಕೆ ಇದ್ದರೂ ಕ್ರಮಕೈಗೊಳ್ಳದ ಸರ್ಕಾರ ಮೊದಲ ಹಂತದ ದಿನವೇ ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಸವಾಲುಗಳ ನಡುವೆ ಹುಲಿಗಣತಿ” ಎಂಬ ಶೀರ್ಷಿಕೆಯ ವರದಿ ಪ್ರಕಟಗೊಂಡಿದ್ದರೂ, ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸದೆ ಉಳಿದದ್ದರಿಂದ ಇಂದು ಎರಡನೇ ಹಂತದ ಮೊದಲ ದಿನವೇ ಸಿಬ್ಬಂದಿ ಮೇಲೆ ಕಾಡುಪ್ರಾಣಿಯ ದಾಳಿ ಸಂಭವಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕಾಡು ಹಂದಿ ದಾಳಿ–ಶೇಷಪ್ಪ ಗಾಯ:
ಮುಗ್ರು ಅರಣ್ಯ ಬೀಟ್‌ನಲ್ಲಿ ಬೆಳಗಿನ ಪರಿಶೀಲನೆ ವೇಳೆ ದಟ್ಟ ಕಾಡಿನಲ್ಲಿ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಡು ಹಂದಿ ದಾಳಿ ನಡೆಸಿ ಅರಣ್ಯ ಇಲಾಖೆಯ ದಿನಕೂಲಿ ನೌಕರ ಶೇಷಪ್ಪ ಗಾಯಗೊಂಡಿದ್ದಾರೆ. ಸಮೀಕ್ಷೆಯ ವೇಳೆ ಅಗತ್ಯ ರಕ್ಷಣಾ ಸಾಧನ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಕೊರತೆಯಿಂದಾಗಿ ಸಿಬ್ಬಂದಿಗಳು ಜೀವಭಯದ ನಡುವೆ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಮುಂದುವರಿದಿದೆ.
ಉಪ್ಪಿನಂಗಡಿ ವಲಯದ ಅರಣ್ಯ ವ್ಯಾಪ್ತಿಯಲ್ಲಿ 18 ಕಡೆಗಳಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಯುತ್ತಿದೆ. ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗಿದೆ.
-ರಾಘವೇಂದ್ರ ಎಚ್.ಪಿ, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಮುಗ್ರು ಬ್ಲಾಕ್ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಶನ್ ನ ಬಳಿ ಗಸ್ತು ಅರಣ್ಯ ಪಾಲಕಿ ಜೊತೆ ಸಮೀಕ್ಷೆಗೆ ತೆರಳುತ್ತಿದ್ದ ವೇಳೆ ಕಾಡು ಹೊಂದಿ ದಾಳಿ ನಡೆಸಿ ಗಾಯಗೊಳಿಸಿದೆ.
-ಶೇಷಪ್ಪ, ಅರಣ್ಯ ದಿನಗೂಲಿ ನೌಕರ







