


ಬೆಳ್ತಂಗಡಿ: ಕರಂಬಾರು ಗ್ರಾಮದ ಬೊಟ್ಟೆಲ್ ಮಾರಿನಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಗೆ ನಡೆಸುತ್ತಿದ್ದ ಸ್ಥಳಕ್ಕೆ ಫೆ.17ರಂದು ವೇಣೂರು ಪೊಲೀಸರು ದಾಳಿ ಮಾಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೇಣೂರು ಪೊಲೀಸ್ ಸಿಬಂದಿ ಬೀರೇಶ್ ಅವರು ಗಸ್ತು ತಿರುಗುತ್ತಿದ್ದ ಸಂದರ್ಭ ಬಂದ ಖಚಿತ ಮಾಹಿತಿಯಂತೆ ಕರಂಬಾರಿನ ಬೊಟ್ಟೆಲ್ ಮಾರಿನ ನದಿ ಕಿನಾರೆಗೆ ತೆರಳಿದಾಗ ಇಬ್ಬರು ಆರೋಪಿಗಳಾದ ವಸಂತ ಹಾಗೂ ರಮೇಶ ಅವರು ಅಕ್ರಮವಾಗಿ ಮರಳುಗಾರಿಕೆ ನಡೆಸಿ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಪಿಕಪ್ ವಾಹನದಲ್ಲಿ ಸುಮಾರು 1 ಯೂನಿಟ್ ನಷ್ಟು ಮರಳು ತುಂಬಿಸಿರುವುದು ಕಂಡುಬಂದಿದ್ದು, ಅದರ ಮೌಲ್ಯ 5 ಸಾವಿರ ರೂ. ಆಗಿರಬಹುದೆಂದು ಅಂದಾಜಿಸಲಾಗಿದೆ.





