ಇಫ್ತಾರ್ ಕೂಟದಿಂದ ಮನೆಗೆ ಬರುತ್ತಿದ್ದಾಗ ಸೈಕಲ್‌ನಿಂದ ಬಿದ್ದು 12 ವರ್ಷದ ಬಾಲಕ ಆಸೀಪ್ ದುರ್ಮರಣ

ಶೇರ್ ಮಾಡಿ
ಇಫ್ತಾರ್‌ನಿಂದ ವಾಪಸ್ಸು: ಸೈಕಲ್ ಬಿದ್ದು ಬಾಲಕ ಆಸೀಪ್ ಸಾವು

ವಿಟ್ಲ: ಇಫ್ತಾರ್ ಕೂಟದಿಂದ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದ ಬಾಲಕ ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಬೂಬಕ್ಕರ್ ಅವರ ಮಗಳು ಅಸ್ಮಾ ಅವರ ಪುತ್ರ ಆಸೀಪ್ (12) ಮೃತ ಬಾಲಕ.

ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂದಿರುಗುವ ವೇಳೆ ರಸ್ತೆಯ ತಿರುವಿನಲ್ಲಿ ಅಕಸ್ಮಾತ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಬಾಲಕನ ದೇಹದ ಒಳಭಾಗಕ್ಕೆ ತೀವ್ರ ಪೆಟ್ಟಾಗಿರುವುದು ತಿಳಿದುಬಂದಿದೆ. ತಕ್ಷಣ ಅವನನ್ನು ಆಸ್ಪತ್ರೆಗೆ ಸಾಗಿಸಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಳಿತ್ತನೂಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ಆಸೀಪ್ ಶಾಲೆಯ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಬಾಲಕನಾಗಿದ್ದನು ಎಂದು ತಿಳಿದುಬಂದಿದೆ.

ತಾಯಿಗೆ ಏಕೈಕ ಮಗನಾಗಿದ್ದ ಆಸೀಪ್‌ನ ಅಕಾಲಿಕ ನಿಧನ ಕುಟುಂಬಸ್ಥರನ್ನು ತೀವ್ರ ಶೋಕಕ್ಕೆ ಗುರಿಮಾಡಿದ್ದು, ಬಂಧುಬಳಗ ಹಾಗೂ ಗ್ರಾಮಸ್ಥರಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ. ಬಾಲಕನ ನಿಧನಕ್ಕೆ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

Leave a Reply

error: Content is protected !!