





ವಿಟ್ಲ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಸಮೀಪದ ನೂಜಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಸುಡಿಮದ್ದು ಹಾಗೂ ಪಟಾಕಿ ತಯಾರಿಕೆಗೆ ಬಳಸುತ್ತಿದ್ದ ಘಟಕದಲ್ಲಿ ಈ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾ.6ರ ಶುಕ್ರವಾರ ಸಂಜೆ ಸುಮಾರು ನಾಲ್ಕೂವರೆ ಗಂಟೆ ವೇಳೆಗೆ ಘಟನೆ ಸಂಭವಿಸಿದೆ. ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಸುಡಿಮದ್ದು ತಯಾರಿಕಾ ಕಾರ್ಯ ನಡೆಯುತ್ತಿದ್ದು, ರಾಸಾಯನಿಕ ಮಿಶ್ರಣದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಜೆಯ ಕಾಫಿ ಕುಡಿಯಲು ಹೊರಗಡೆ ಹೋಗಿದ್ದ ವೇಳೆ ಏಕಾಏಕಿ ಸ್ಫೋಟ ಉಂಟಾಗಿದೆ. ಪರಿಣಾಮವಾಗಿ ಘಟಕದ ಸುಮಾರು ಐದು ಸೆಂಟ್ಸ್ ವ್ಯಾಪ್ತಿಯ ಪ್ರದೇಶ ಸಂಪೂರ್ಣ ಹಾನಿಗೊಳಗಾಗಿದೆ. ಸ್ಫೋಟ ಸಂಭವಿಸಿದಾಗ ವಾತಾವರಣದ ತುಂಬಾ ಎತ್ತರಕ್ಕೆ ಹೊಗೆ ಆವರಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡರು.
ಕಂಬಳಬೆಟ್ಟು ನಿವಾಸಿ ಗಫೂರ್ ಎಂಬವರು ದೇವಸ್ಥಾನದ ಜಾತ್ರೋತ್ಸವಕ್ಕಾಗಿ ಪಟಾಕಿ ತಯಾರಿಸಿ ಸಂಗ್ರಹಿಸಿಟ್ಟಿದ್ದ ವೇಳೆ ಮಧ್ಯಾಹ್ನದ ಬಿಸಿಲಿನ ಪರಿಣಾಮದಿಂದ ಪಟಾಕಿಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಅಮೋನಿಯಂ ನೈಟ್ರೇಟ್ ಸೇರಿದಂತೆ ಹಲವು ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಸ್ಫೋಟವಾಗದೇ ಉಳಿದಿದ್ದ ಕೆಲವು ವಸ್ತುಗಳನ್ನು ನದಿ ನೀರಿಗೆ ಎಸೆದು ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿ, ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ಎಸೈ ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿ ಪಟಾಕಿ ತಯಾರಿಕೆಗೆ ಯಾವುದೇ ಅಧಿಕೃತ ಅನುಮತಿ ಪಡೆಯಲಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಒಂಬತ್ತು ವರ್ಷಗಳ ಹಿಂದಿನ ದುರಂತದ ನೆನಪು
ಈ ಪ್ರದೇಶದಲ್ಲಿ 2017ರಲ್ಲಿ ಸಹ ಇದೇ ರೀತಿಯ ಭಾರಿ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಫೂರ್ ಅವರ ಮನೆ ಸಮೀಪ ನಡೆದ ಆ ದುರಂತದಲ್ಲಿ ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು. ಆ ಪ್ರಕರಣ ಇನ್ನೂ ಇತ್ಯರ್ಥವಾಗದೇ ಇರುವ ನಡುವೆಯೇ ಈಗ ಅದೇ ಪ್ರದೇಶದ ಸಮೀಪ ಮತ್ತೊಮ್ಮೆ ಸ್ಫೋಟ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಕಳೆದ ವರ್ಷ ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಡ್ಕ ಪರಿಸರದ ಕೋರೆಯಲ್ಲಿ ಸಂಭವಿಸಿದ್ದ ಸ್ಫೋಟದಿಂದ ಸುತ್ತಮುತ್ತಲಿನ ಆರೇಳು ಮನೆಗಳು ಹಾನಿಗೊಳಗಾಗಿದ್ದವು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಸುಡಿಮದ್ದು ಹಾಗೂ ಪಟಾಕಿ ತಯಾರಿಕಾ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಅಳಿಕೆ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಸತೀಶ್ ಸುವರ್ಣ ಎಂಬವರ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿತ ಅಬ್ದುಲ್ ಗಫೂರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.





