




ನೆಲ್ಯಾಡಿ: ನೆಲ್ಯಾಡಿಯ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ 2025–2026ನೇ ಶೈಕ್ಷಣಿಕ ವರ್ಷದ ಯುಕೆಜಿ ವಿದ್ಯಾರ್ಥಿಗಳ ಪ್ರೀ–ಗ್ರಾಜುವೇಶನ್ ಪದವಿ ಪ್ರಧಾನ ಸಮಾರಂಭ ಶನಿವಾರ ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಬಹು ಇಬ್ರಾಹಿಂ ಸಖಾಫಿ ಉಸ್ತಾದ್ ಅವರ ದುಆ ದೊಂದಿಗೆ ಆರಂಭವಾಯಿತು. ಪಡಿಕ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ನೆಲ್ಯಾಡಿ ಬದ್ರಿಯಾ ಜಮಾ ಮಸೀದಿ ಅಧ್ಯಕ್ಷ ಎನ್.ಇಸ್ಮಾಯಿಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಸಾಧನವಾಗಿದ್ದು, ಉತ್ತಮ ಶಿಕ್ಷಣದ ಮೂಲಕ ಸಮಾಜದಲ್ಲಿ ಸದುಪಯೋಗಿ ನಾಗರಿಕರನ್ನು ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು. ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಝೀಮ್ ಅವರು ವಹಿಸಿ ವಿದ್ಯಾರ್ಥಿಗಳು ಬಾಲ್ಯದಲ್ಲೇ ಉತ್ತಮ ಶಿಕ್ಷಣ, ಶಿಸ್ತು ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುಕೆಜಿ ತರಗತಿಯ 28 ವಿದ್ಯಾರ್ಥಿಗಳಿಗೆ ಪ್ರೀ–ಗ್ರಾಜುವೇಶನ್ ಪದವಿಯನ್ನು ಪ್ರದಾನ ಮಾಡಲಾಯಿತು. ಜೊತೆಗೆ ಚಿಕ್ಕಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಬದ್ರಿಯಾ ಜಮಾ ಮಸೀದಿ ಮಾಜಿ ಅಧ್ಯಕ್ಷ ಎನ್.ಎಸ್. ಸುಲೈಮಾನ್ ಅವರು ಶುಭಾಶಯ ಕೋರಿದರು. ಇಸ್ಮಾಯಿಲ್ ಸಹದಿ ಸದರ್ ಉಸ್ತಾದ್, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕೆರೆ, ಸಿದ್ದೀಕ್ ಎಂ, ರಫೀಕ್ ಅಲಂಪಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಆರ್ ಸ್ವಾಗತಿಸಿದರು. ಶಿಕ್ಷಕಿ ಸಾಜಿದಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





