ನೆಲ್ಯಾಡಿಯಲ್ಲಿ ಕೈಕೊಟ್ಟ ಏರ್ಟೆಲ್ ನೆಟ್ವರ್ಕ್ – ಮೂರು ಗಂಟೆ ಸಿಗ್ನಲ್ ಇಲ್ಲದೆ ಗ್ರಾಹಕರ ಪರದಾಟ

ಶೇರ್ ಮಾಡಿ
ನೆಲ್ಯಾಡಿಯಲ್ಲಿ ಕೈಕೊಟ್ಟ ಏರ್ಟೆಲ್ ನೆಟ್ವರ್ಕ್ – ಮೂರು ಗಂಟೆ ಸಿಗ್ನಲ್ ಇಲ್ಲದೆ ಗ್ರಾಹಕರ ಪರದಾಟ

ನೆಲ್ಯಾಡಿ: ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನದ ಸಮಯ ಏಕಾಏಕಿ ಏರ್ಟೆಲ್ ಮೊಬೈಲ್ ನೆಟ್ವರ್ಕ್ ಕೈಕೊಟ್ಟ ಪರಿಣಾಮ ಸಾವಿರಾರು ಗ್ರಾಹಕರು ಹಲವು ಗಂಟೆಗಳ ಕಾಲ ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ. ಸುಮಾರು ಮೂರು ಗಂಟೆಗಳ ಕಾಲ ಮೊಬೈಲ್ ಸಿಗ್ನಲ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗದೆ ಜನರು ಪರದಾಡುವಂತಾಯಿತು.

ನೆಟ್ವರ್ಕ್ ಸಮಸ್ಯೆ ಉಂಟಾದ ಪರಿಣಾಮ ಗ್ರಾಹಕರಿಗೆ ವಾಯ್ಸ್ ಕಾಲ್, ಎಸ್‌ಎಂಎಸ್ ಹಾಗೂ ಇಂಟರ್‌ನೆಟ್ ಸೇವೆಗಳು ಸಂಪೂರ್ಣವಾಗಿ ವ್ಯತ್ಯಯಗೊಂಡಿದ್ದವು. ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಆನ್‌ಲೈನ್ ಸೇವೆಗಳನ್ನು ಅವಲಂಬಿಸಿರುವ ಹಲವಾರು ಮಂದಿ ತೀವ್ರ ತೊಂದರೆ ಅನುಭವಿಸಿದರು. ಡಿಜಿಟಲ್ ವ್ಯವಹಾರಗಳಿಗೂ ಇದರಿಂದ ಅಡಚಣೆ ಉಂಟಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ನಡುವೆ ಗ್ರಾಹಕರ ಮೊಬೈಲ್‌ಗಳಿಗೆ ಏರ್ಟೆಲ್ ಕಂಪನಿಯಿಂದ ಸರ್ವಿಸ್ ಅಪ್ಡೇಟ್ ಸಂದೇಶ ರವಾನೆಯಾಗಿದ್ದು, “ನಿಮ್ಮ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಏರ್ಟೆಲ್ ಮೊಬೈಲ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನಮ್ಮ ತಾಂತ್ರಿಕ ತಂಡವು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ” ಎಂದು ತಿಳಿಸಲಾಗಿದೆ.

ಸುಮಾರು ಮೂರು ಗಂಟೆಗಳ ಬಳಿಕ ನೆಟ್ವರ್ಕ್ ಸೇವೆ ಹಂತ ಹಂತವಾಗಿ ಪುನಃ ಲಭ್ಯವಾಗಿದ್ದು, ಬಳಿಕ ಗ್ರಾಹಕರು ಸಾಮಾನ್ಯ ಸೇವೆಗಳನ್ನು ಬಳಸಲು ಸಾಧ್ಯವಾಯಿತು. ಸ್ಥಳೀಯರು ಹೇಳುವಂತೆ ಕಳೆದ ಸುಮಾರು 15 ದಿನಗಳಿಂದ ನೆಲ್ಯಾಡಿ ಭಾಗದಲ್ಲಿ ಏರ್ಟೆಲ್ ನೆಟ್ವರ್ಕ್ ಪದೇ ಪದೇ ಡೌನ್ ಆಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಗ್ರಾಹಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಏರ್ಟೆಲ್ ಕಂಪನಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

Leave a Reply

error: Content is protected !!