





ನೆಲ್ಯಾಡಿ: ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ವತಿಯಿಂದ ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ, ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಹಾಗೂ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಯುತ್ತಿರುವ ಮಹಿಳಾ ಸಬಲೀಕರಣ ಯೋಜನೆಯಡಿ ಜಿಲ್ಲಾ ಒಕ್ಕೂಟದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ ಕಾರ್ಯಕ್ರಮವನ್ನು ಏ.07ರಂದು ನೆಲ್ಯಾಡಿಯ ಸೈಂಟ್ ಆಲ್ಫೋನ್ಸಾ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹಕಿರಣ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಎಲಿಯಮ್ಮ ತೋಮಸ್ ವಹಿಸಿದ್ದರು. ಉದ್ಘಾಟನೆಯನ್ನು ಮಾನಿನಿ ರಾಜ್ಯ ಮಹಿಳಾ ಒಕ್ಕೂಟ (ರಿ), ಬೆಂಗಳೂರು ಇದರ ಅಧ್ಯಕ್ಷೆ ಮಂಜುಳಾ ಜೋನ್ ನೆರವೇರಿಸಿ, ಮಹಿಳಾ ಸಂಘಟನೆಗಳ ಬಲವರ್ಧನೆಗೆ ಇಂತಹ ತರಬೇತಿಗಳು ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಬಿನೋಯಿ ಎ.ಜೆ ಅವರು ಮಾತನಾಡಿ ಒಕ್ಕೂಟಗಳ ಸದಸ್ಯರು ನಾಯಕತ್ವ ಗುಣಗಳನ್ನು ಬೆಳೆಸಿ ಸಂಘಟನೆಗಳನ್ನು ಬಲಪಡಿಸಬೇಕು. ಸಂಘಟನೆಗಳನ್ನು ಯಶಸ್ವಿಯಾಗಿ ಮುನ್ನಡೆಸಲು ತಮ್ಮ ಬಲಗಳು, ಬಲಹೀನತೆಗಳು, ಅವಕಾಶಗಳು ಹಾಗೂ ಅಪಾಯಗಳನ್ನು ಸರಿಯಾಗಿ ಗುರುತಿಸಬೇಕು. ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತರಬೇತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಸದಸ್ಯೆ ಚಂದನ ಪ್ರಾರ್ಥನಾ ಗೀತೆ ಹಾಡಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಉಪಾಧ್ಯಕ್ಷೆ ಜಿನ್ಸಿ ರಾಜೇಶ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವೈಶಾಲಿ ವಂದಿಸಿದರು. ಮಾರ್ಕ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕೂಟದ ಸದಸ್ಯರು ಹಾಗೂ ವಿವಿಧ ಮಹಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.




