ನೆಲ್ಯಾಡಿ: ರಾ.ಹೆ. 75ರಲ್ಲಿ ಲಾರಿ ದರೋಡೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಧರ್ಮಸ್ಥಳ ಪೊಲೀಸರು

ಶೇರ್ ಮಾಡಿ

 

ನೆಲ್ಯಾಡಿ: ರಾ.ಹೆ. 75ರಲ್ಲಿ ಲಾರಿ ದರೋಡೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಧರ್ಮಸ್ಥಳ ಪೊಲೀಸರು

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದಲ್ಲಿ 2017ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ರೆಖ್ಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ದರೋಡೆ ಪ್ರಕರಣದ ಎರಡನೇ ಆರೋಪಿಯಾಗಿರುವ ಮಣಿ @ ಮಣಿಕಂಠ (32), ಬೆಂಗಳೂರು ಬನಶಂಕರಿ ನಿವಾಸಿಯಾಗಿದ್ದು, ಪ್ರಕರಣದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.

ಆರೋಪಿಯ ಚಲನವಲನಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಅವರ ನೇತೃತ್ವದ ಪೊಲೀಸ್ ತಂಡ, ಸಿಬ್ಬಂದಿಗಳಾದ ವೃಷಭ ಮತ್ತು ಚರಣ್ ರಾಜ್ ಅವರೊಂದಿಗೆ ಬೆಂಗಳೂರಿನ ಬನಶಂಕರಿ ಮಾರ್ಕೆಟ್ ಬಳಿ ಏ.26ರಂದು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಏ.27ರಂದು ಮಾನ್ಯ ಪುತ್ತೂರು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

Leave a Reply

error: Content is protected !!