





ಕಡಬ: ತಾಲೂಕಿನ ಬಲ್ಯ ಗ್ರಾಮದ ಕೊಲ್ಯದಕಟ್ಟ ಪ್ರದೇಶದಲ್ಲಿ ಗುಂಡ್ಯ ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ತಂಡದ ಮೇಲೆ ಕಡಬ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ ಮರಳು ಸಾಗಾಟಕ್ಕೆ ಬಳಸುತ್ತಿದ್ದ ಪಿಕ್‌ಅಪ್ ವಾಹನ ಸೇರಿದಂತೆ ಸುಮಾರು ₹5,06,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಏ.26ರಂದು ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಅವರು ಸಿಬ್ಬಂದಿಗಳೊಂದಿಗೆ ತನಿಖೆಗಾಗಿ ಬಲ್ಯ ಗ್ರಾಮದತ್ತ ತೆರಳುತ್ತಿದ್ದ ವೇಳೆ ಹೊಸ್ಮಠ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ತಕ್ಷಣ ಎಚ್ಚೆತ್ತ ಪೊಲೀಸರು ಕೊಲ್ಯದಕಟ್ಟದ ಗುಂಡ್ಯ ಹೊಳೆಯ ದಡಕ್ಕೆ ದಾಳಿ ನಡೆಸಿದರು.
ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವ ಸ್ಥಳದಲ್ಲಿ ಅಕ್ರಮವಾಗಿ ಮರಳನ್ನು ರಾಶಿ ಹಾಕಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಉದ್ದೇಶದಿಂದ ಮರಳು ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ನಾರಾಯಣ(54), ಪ್ರಸನ್ನ(33) ಮತ್ತು ಗಿರೀಶ್(41) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಒಂದು ಪಿಕ್‌ಅಪ್ ಲೋಡ್ ಮರಳು(ಅಂದಾಜು ₹5,000), KA 21 B 2852 ಸಂಖ್ಯೆಯ ಬೊಲೆರೊ ಪಿಕ್‌ಅಪ್ ವಾಹನ(ಅಂದಾಜು ₹5 ಲಕ್ಷ), ಹಾಗೂ ಮರಳು ತೆಗೆಯಲು ಬಳಸುತ್ತಿದ್ದ ಉಪಕರಣಗಳು ಸೇರಿವೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಾರಣ ದಾಖಲಾಗಿದೆ.



