ಕಡಬ: ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ

ಶೇರ್ ಮಾಡಿ

 

ನದಿಗೆ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ದಾರುಣ ಘಟನೆ ಸೋಮವಾರ ಸಂಜೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಪ್ರದೇಶದಲ್ಲಿ ನಡೆದಿದೆ.

ನಾಪತ್ತೆಯಾದ ಯುವಕನನ್ನು ಮಂಜು ಅವರ ಪುತ್ರ ರಕ್ಷಿತ್(26) ಎಂದು ಗುರುತಿಸಲಾಗಿದೆ. ಮೂಲತಃ ಮರ್ದಾಳ ನಿವಾಸಿಯಾಗಿರುವ ರಕ್ಷಿತ್ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈಜಲು ತಿಳಿದಿದ್ದರೂ, ನೀರಿನ ಸೆಳೆತ ಅಥವಾ ಆಳದ ಅಂದಾಜು ತಪ್ಪಿದ್ದರಿಂದ ರಕ್ಷಿತ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕಡಬ ಪೊಲೀಸರು ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದುರ್ಗಮ ಸ್ಥಳವಾದ ಕಾರಣ ಅಗ್ನಿಶಾಮಕದ ವಾಹನ ಘಟನೆ ನಡೆದ ಸ್ಥಳಕ್ಕೆ ಹೋಗಲು ಸಾಧ್ಯವಾಗದ ಕಾರಣ. ಸಿಬ್ಬಂದಿಗಳು ನಡೆದು ಕೊಂಡು ಸ್ಥಳಕ್ಕೆ ತಲುಪಿದ್ದಾರೆ.

ಕತ್ತಲಾದ ಕಾರಣ ಶೋಧ ಕಾರ್ಯಕ್ಕೆ ಕೆಲವು ಅಡಚಣೆಗಳು ಎದುರಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

 

Leave a Reply

error: Content is protected !!