ನೆಲ್ಯಾಡಿ ಜೇಸಿಐ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ – 38 ಯೂನಿಟ್ ರಕ್ತ ಸಂಗ್ರಹ

ಶೇರ್ ಮಾಡಿ

 

ನೆಲ್ಯಾಡಿ: ಜೇಸಿಐ ನೆಲ್ಯಾಡಿ ವತಿಯಿಂದ ಬೃಹತ್ ರಕ್ತದಾನ ಶಿಬಿರವು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳೂರು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ನಡೆದ ಈ ಶಿಬಿರವನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೇಸಿ ಅಬ್ರಹಾಂ ವರ್ಗೀಸ್ ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಯಾಗಿದೆ. ನಮ್ಮ ದೇಹದಲ್ಲಿ ಇರುವ ಸ್ವಲ್ಪ ರಕ್ತ ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯ ಸಂಪತ್ತಾಗಬಹುದು. ಸಮಾಜದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು. ಆರೋಗ್ಯಕರ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿ ಸ್ವಾಗತಿಸಿ ನಿರೂಪಿಸಿದರು.

ಜೇಸಿಐ ವಲಯ 15ರ ವಲಯ ಯೋಜನಾಧಿಕಾರಿ ಪ್ರದೀಪ್ ಕುಮಾರ್ ರೈ ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಸಮರ್ಪಕ ಜಾಗೃತಿ ಕೊರತೆಯಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ಹಲವು ಸಂಘ-ಸಂಸ್ಥೆಗಳು ಒಂದಾಗಿ ಶಿಬಿರ ಆಯೋಜಿಸಿದಾಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಮ್ಮೆ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಿಕಾ, ಸಂಯೋಜಕ ಆಂಟೋನಿ, ಜೇಸಿಐ ನಿಕಟ ಪೂರ್ವಾಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮಹಿಳಾ ಜೆಸಿ ಅಧ್ಯಕ್ಷೆ ನವ್ಯ ಪ್ರಸಾದ್, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಪ್ರಶಾಂತ್ ಹಾಗೂ ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಹರಿ ಸಂಗೀತ ಕಲಾ ಕೇಂದ್ರ, ಐಐಸಿಟಿ ನೆಲ್ಯಾಡಿ, ಧರ್ಮಶ್ರೀ ಮಹಿಳಾ ಮತ್ತು ಮಕ್ಕಳ ಭಜನಾ ಮಂಡಳಿ ಕೌಕ್ರಾಡಿ, ಹೊಸಮಜಲು ಅಶ್ವತ್ಥ ಗೆಳೆಯರ ಬಳಗ, ಮಹಾವಿಷ್ಣು ಗೆಳೆಯರ ಬಳಗ ಅಮುಂಜ, ಪಡುಬೆಟ್ಟು ಆಟೋರಿಕ್ಷಾ ಚಾಲಕ-ಮಾಲಕರು, ಎನ್‌ಎಸ್‌ಎಸ್ ಘಟಕ ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ, ಎಸ್‌ಎಸ್‌ವಿ ಗೆಳೆಯರ ಬಳಗ ದೋಂತಿಲ, ಟೀಮ್ ಸಿಂಧೂರ ನೆಲ್ಯಾಡಿ, ರಾಮನಗರ ಫ್ರೆಂಡ್ಸ್, ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ, ಬೆಥನಿ ಐಟಿಐ ನೆಲ್ಯಾಡಿ, ವರ್ತಕರ ಮತ್ತು ಕೈಗಾರಿಕ ಸಂಘ ನೆಲ್ಯಾಡಿ ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಸೇರಿದಂತೆ ಅನೇಕ ಸಂಘಟನೆಗಳು ಶಿಬಿರಕ್ಕೆ ಸಹಕಾರ ನೀಡಿದವು.

ಶಿಬಿರದಲ್ಲಿ ದಾನಿಗಳಿಂದ ಒಟ್ಟು 38 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಜೇಸಿಐ ಸದಸ್ಯೆ ದೀಪಿಕಾ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿಐ ಸದಸ್ಯೆ ನಮಿತಾ ಅಮ್ಮುಂಜ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ವಂದಿಸಿದರು.

 

Leave a Reply

error: Content is protected !!