ಕೊಕ್ಕಡದಲ್ಲಿ ₹83 ಲಕ್ಷ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆಗೆ ಸಜ್ಜು
ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ ನಿರ್ಮಾಣ ಪೂರ್ಣ – ಆರೋಗ್ಯ, ಪುನರ್‌ವಸತಿ ಮತ್ತು ಆರೈಕೆಗೆ ಸಮಗ್ರ ಸೌಲಭ್ಯ







ಕೊಕ್ಕಡ: ವರ್ಷಗಳಿಂದ ಎಂಡೋಸಲ್ಫಾನ್ ವಿಷದ ಪರಿಣಾಮದಿಂದ ದೈಹಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರ ಬದುಕಿಗೆ ಆಶಾಕಿರಣವಾಗಲಿರುವ ಪುನರ್‌ವಸತಿ ಕೇಂದ್ರ ಇದೀಗ ಕೊಕ್ಕಡದಲ್ಲಿ ಲೋಕಾರ್ಪಣೆಗೆ ಸಜ್ಜಾಗಿದೆ. ಎಂಆರ್‌ಪಿಎಲ್ ಸಂಸ್ಥೆಯ ವತಿಯಿಂದ ಸುಮಾರು ₹83 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಕಟ್ಟಡವು ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ, ಪುನರ್‌ವಸತಿ ಹಾಗೂ ಭವಿಷ್ಯದ ಅನುಕೂಲಕ್ಕಾಗಿ ಸಮಗ್ರ ಸೌಲಭ್ಯಗಳನ್ನು ಒಳಗೊಂಡಿದೆ.
ಸುಮಾರು ವರ್ಷಗಳ ಕಾಲ ಕೊಕ್ಕಡ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಇದೀಗ ಕೊಕ್ಕಡ ಗ್ರಾಮ ಪಂಚಾಯತ್ ಸಮೀಪ ಮೀಸಲಿಟ್ಟ ಜಾಗದಲ್ಲಿ ಸುಮಾರು 2500 ಚದರ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರದ ಭೂಮಿ ಪೂಜೆಯನ್ನು 2025ರ ಮಾರ್ಚ್ 8ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದ್ದರು. ಇದೀಗ ಕಟ್ಟಡ ಕಾಮಗಾರಿ ಹಾಗೂ ಸಂಪರ್ಕ ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ.
ಸಂತ್ರಸ್ತರ ಆರೈಕೆಗೆ ಸಮಗ್ರ ವ್ಯವಸ್ಥೆ
ಎಂಡೋಸಲ್ಫಾನ್ ಸಂತ್ರಸ್ತರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಕಟ್ಟಡದಲ್ಲಿ ವಿಶಾಲ ಸಭಾಂಗಣ, ಫಿಜಿಯೋಥೆರಪಿ ಕೊಠಡಿ, ಸ್ಟಾಕ್ ರೂಂ, ಅಡುಗೆಮನೆ, ಭೋಜನಾಲಯ ಸೇರಿದಂತೆ ಒಟ್ಟು ಏಳು ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಂತ್ರಸ್ತರಿಗೆ ಚಿಕಿತ್ಸೆ, ಆರೈಕೆ, ಪುನಶ್ಚೇತನ ಹಾಗೂ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ದೈಹಿಕ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತರಿಗೆ ಫಿಜಿಯೋಥೆರಪಿ ಸೌಲಭ್ಯ ಮಹತ್ವದ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಟ್ಟಡಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಯೂ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರಿಗೆ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸಲಿದೆ.
ಹೋರಾಟದ ಫಲವಾಗಿ ಸಾಕಾರಗೊಂಡ ಕನಸು
ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳ ಕುರಿತು ಹಲವು ವರ್ಷಗಳಿಂದ ನಿರಂತರ ಹೋರಾಟಗಳು ನಡೆಯುತ್ತಲೇ ಬಂದಿವೆ. ವಿಶೇಷವಾಗಿ ಎಂಡೋಸಲ್ಫಾನ್ ಹೋರಾಟ ಸಮಿತಿಯ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ್ ಕೆಂಗುಡೇಲು ಅವರ ನೇತೃತ್ವದಲ್ಲಿ ಅನೇಕ ಪ್ರತಿಭಟನೆಗಳು, ಮನವಿ ಕಾರ್ಯಕ್ರಮಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಹೋರಾಟಗಳು ನಡೆದಿದ್ದವು.
ಸಂತ್ರಸ್ತರಿಗೆ ಪ್ರತ್ಯೇಕ ಪುನರ್‌ವಸತಿ ಕೇಂದ್ರ ನಿರ್ಮಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದ್ದ ಹಿನ್ನೆಲೆ ಇದೀಗ ಈ ಯೋಜನೆ ಸಾಕಾರಗೊಂಡಿರುವುದು ಸಂತ್ರಸ್ತ ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ನನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷೀಯ ಅವಧಿಯಲ್ಲಿ ಪುನರ್‌ವಸತಿ ಕೇಂದ್ರ ನಿರ್ಮಾಣಕ್ಕಾಗಿ 20 ಸೆಂಟ್ಸ್ ಜಾಗವನ್ನು ಮೀಸಲಿಡಲಾಗಿತ್ತು. ಇಂದು ಅದೇ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುವುದು ಅತ್ಯಂತ ಸಂತೋಷ ತಂದಿದೆ. ಎಂಡೋಸಲ್ಫಾನ್ ಸಂತ್ರಸ್ತರ ನೋವು ಹಾಗೂ ಸಂಕಷ್ಟ ತುಂಬಾ ಗಂಭೀರವಾದದ್ದು. ಅವರ ಆರೋಗ್ಯ, ಆರೈಕೆ ಮತ್ತು ಪುನರ್‌ವಸತಿಗಾಗಿ ಸಮಗ್ರ ಸೌಲಭ್ಯಗಳಿರುವ ಕೇಂದ್ರದ ಅಗತ್ಯ ಬಹಳ ವರ್ಷಗಳಿಂದ ಇತ್ತು. ಇದೀಗ ಎಂಆರ್‌ಪಿಎಲ್ ಸಹಕಾರದೊಂದಿಗೆ ಈ ಮಹತ್ವದ ಯೋಜನೆ ಸಾಕಾರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಕೇಂದ್ರವು ಸಂತ್ರಸ್ತರ ಬದುಕಿಗೆ ಆಶ್ರಯವಾಗಲಿದೆ ಎಂಬ ವಿಶ್ವಾಸವಿದೆ.
— ಯೋಗೀಶ್ ಆಲಂಬಿಲ, ನಿಕಟಪೂರ್ವ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಕೊಕ್ಕಡ
ಎಂಡೋಸಲ್ಫಾನ್ ಸಂತ್ರಸ್ತರ ಪೋಷಕರ ಬಹುದಿನಗಳ ಕನಸು ಶಾಶ್ವತ ಪುನರ್‌ವಸತಿ ಕೇಂದ್ರ ನಿರ್ಮಾಣವಾಗುವುದಾಗಿತ್ತು. ಆ ಕನಸಿನ ಸಾಕಾರಕ್ಕೆ ಇದು ಮೊದಲ ಹೆಜ್ಜೆಯಾಗಿದೆ. ಸಂತ್ರಸ್ತರ ಸಂಕಷ್ಟ, ನೋವು ಹಾಗೂ ಕುಟುಂಬಗಳ ದುಸ್ಥಿತಿಯನ್ನು ಕಂಡು ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ, ಆರೈಕೆ ಹಾಗೂ ಪುನರ್‌ವಸತಿಗಾಗಿ ಪ್ರತ್ಯೇಕ ಮತ್ತು ಸಮಗ್ರ ಸೌಲಭ್ಯಗಳ ಕೇಂದ್ರ ನಿರ್ಮಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುವುದು ತುಂಬಾ ಸಂತೋಷ ತಂದಿದೆ. ಈ ಕೇಂದ್ರ ಮುಂದಿನ ದಿನಗಳಲ್ಲಿ ಪೀಡಿತರ ಬದುಕಿಗೆ ದೊಡ್ಡ ನೆರವಾಗಲಿದೆ ಎಂಬ ವಿಶ್ವಾಸವಿದೆ.
— ಶ್ರೀಧರ ಗೌಡ ಕೆಂಗುಡೇಲು, ಅಧ್ಯಕ್ಷ ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡ


