ಕಾರ್ಯಭಾರ ಕೊರತೆ ಹೆಸರಿನ ನಿಯೋಜನೆ : ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಗೆ ಹೊಡೆತ

ಶೇರ್ ಮಾಡಿ

 

ನೆಲ್ಯಾಡಿ: ರಾಜ್ಯದ ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ “ಕಾರ್ಯಭಾರ ಕೊರತೆ” ಎಂಬ ಪದ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಈ ಪದದ ಅರ್ಥವನ್ನು ಹೇಗೆ ವ್ಯಾಖ್ಯಾನಿಸಲಾಗುತ್ತಿದೆ ಎಂಬುದೇ ಇಂದು ದೊಡ್ಡ ಚಿಂತೆಯ ವಿಷಯವಾಗಿದೆ. ಶಿಕ್ಷಣದ ಮೂಲ ಉದ್ದೇಶ, ವಿಷಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ಕೇವಲ ಆಡಳಿತಾತ್ಮಕ ಲೆಕ್ಕಾಚಾರಗಳ ಆಧಾರದಲ್ಲಿ ಉಪನ್ಯಾಸಕರನ್ನು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ನಿಯೋಜಿಸುವ ಪ್ರವೃತ್ತಿ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲಿನ ಗಂಭೀರ ಹೊಡೆತವಾಗಿದೆ.

ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಗಂಟೆ ಆಧಾರಿತ ಕಾರ್ಮಿಕರಲ್ಲ. ಅವರು ಒಂದು ವಿಷಯಕ್ಕೆ ಶಾಶ್ವತವಾಗಿ ನೇಮಕಗೊಂಡಿರುವ ಜ್ಞಾನಸೇವಕರು. ಒಂದು ವಿಷಯವನ್ನು ಜೀವಂತವಾಗಿಡುವುದು, ವಿದ್ಯಾರ್ಥಿಗಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಅವರ ಭವಿಷ್ಯ ರೂಪಿಸುವುದು ಉಪನ್ಯಾಸಕರ ಪ್ರಮುಖ ಶೈಕ್ಷಣಿಕ ಹೊಣೆಗಾರಿಕೆಯಾಗಿದೆ. ಆದರೆ ಇಂದು ಈ ಮಹತ್ವದ ಸೇವೆಯನ್ನು ಕೇವಲ “ವಾರಕ್ಕೆ ಎಷ್ಟು ಬೋಧನಾ ಗಂಟೆಗಳು?” ಎಂಬ ಸೀಮಿತ ಲೆಕ್ಕಾಚಾರಕ್ಕೆ ಇಳಿಸಲಾಗುತ್ತಿದೆ. ವಾಸ್ತವದಲ್ಲಿ ಕಾರ್ಯಭಾರ ಎಂದರೆ ಕೇವಲ ತರಗತಿ ತೆಗೆದುಕೊಳ್ಳುವ ಸಮಯವಲ್ಲ. ಪಾಠಯೋಜನೆ ಸಿದ್ಧತೆ, ವಿದ್ಯಾರ್ಥಿಗಳ ಸಂದೇಹ ಪರಿಹಾರ, ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ, ದಾಖಲಾತಿ ನಿರ್ವಹಣೆ, ಫಲಿತಾಂಶ ಸುಧಾರಣೆ, ಪೋಷಕರೊಂದಿಗೆ ಸಂಪರ್ಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು—ಇವೆಲ್ಲವೂ ಕಾರ್ಯಭಾರದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇವುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಬೋಧನಾ ಗಂಟೆಗಳ ಆಧಾರದ ಮೇಲೆ “ಕಾರ್ಯಭಾರ ಕೊರತೆ” ಎಂದು ಘೋಷಿಸುವುದು ಶಿಕ್ಷಣದ ಮೌಲ್ಯವನ್ನೇ ಕುಗ್ಗಿಸುವಂತಾಗಿದೆ.

ಒಂದು ವಿಷಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಆ ವಿಷಯದ ಉಪನ್ಯಾಸಕರನ್ನು ಬೇರೆ ಕಾಲೇಜಿಗೆ ಕಳುಹಿಸುವ ಕ್ರಮ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಶಿಕ್ಷಣವೆಂದರೆ ಲಾಭ-ನಷ್ಟದ ವ್ಯವಹಾರವಲ್ಲ. ಒಂದು ವಿದ್ಯಾರ್ಥಿ ಇದ್ದರೂ ಸಹ ಆ ವಿದ್ಯಾರ್ಥಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಸಂವಿಧಾನಬದ್ಧ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಶಿಕ್ಷಕರ ಅಗತ್ಯವನ್ನು ನಿರ್ಧರಿಸುವುದು ಮುಂದಿನ ದಿನಗಳಲ್ಲಿ ಗ್ರಾಮೀಣ ಕಾಲೇಜುಗಳು, ಕನ್ನಡ ಮಾಧ್ಯಮ ಹಾಗೂ ಕೆಲವು ಪ್ರಮುಖ ವಿಷಯಗಳ ಅಸ್ತಿತ್ವಕ್ಕೂ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ.

ವಾರದಲ್ಲಿ ಮೂರು ದಿನ ಬೇರೆ ಕಾಲೇಜಿಗೆ ನಿಯೋಜನೆ ಮಾಡುವ ಕ್ರಮದಿಂದ ಉಪನ್ಯಾಸಕರು ಎರಡು ಸಂಸ್ಥೆಗಳ ನಡುವೆ ನಿರಂತರ ಓಡಾಟ ನಡೆಸುವ ಪರಿಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೂಲ ಕಾಲೇಜಿನ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ಸಿಗುವುದಿಲ್ಲ. ಪಾಠದ ನಿರಂತರತೆ ಕುಂದುತ್ತದೆ. ವಿದ್ಯಾರ್ಥಿ ಮತ್ತು ಉಪನ್ಯಾಸಕರ ನಡುವೆ ನಿರ್ಮಾಣವಾಗಬೇಕಾದ ಶೈಕ್ಷಣಿಕ ನಂಟು ದುರ್ಬಲಗೊಳ್ಳುತ್ತದೆ. ಉಪನ್ಯಾಸಕರಲ್ಲಿ ದೈಹಿಕ ದಣಿವು, ಮಾನಸಿಕ ಒತ್ತಡ ಹಾಗೂ ವೃತ್ತಿಪರ ಅಸಮಾಧಾನ ಹೆಚ್ಚಾಗುತ್ತದೆ. ಪ್ರಯಾಣದಲ್ಲೇ ಅಮೂಲ್ಯ ಸಮಯ ವ್ಯರ್ಥವಾಗುವುದರಿಂದ ಶಿಕ್ಷಣದ ಗುಣಮಟ್ಟಕ್ಕೂ ನೇರ ಹಾನಿಯಾಗುತ್ತದೆ. ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವುದು ಗ್ರಾಮೀಣ ಮತ್ತು ಅನುದಾನಿತ ಕಾಲೇಜುಗಳು. ಈಗಾಗಲೇ ಮೂಲಸೌಕರ್ಯ ಮತ್ತು ವಿದ್ಯಾರ್ಥಿ ಸಂಖ್ಯೆಯ ಸವಾಲುಗಳನ್ನು ಎದುರಿಸುತ್ತಿರುವ ಇಂತಹ ಸಂಸ್ಥೆಗಳಿಗೆ ಸ್ಥಿರ ಉಪನ್ಯಾಸಕರ ಕೊರತೆ ಮತ್ತಷ್ಟು ಸಂಕಷ್ಟ ಉಂಟುಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ಶಾಶ್ವತ ಶೈಕ್ಷಣಿಕ ಕೇಂದ್ರಗಳಾಗಿ ಬಲಪಡಿಸುವ ಬದಲು, ತಾತ್ಕಾಲಿಕ ಆಡಳಿತಾತ್ಮಕ ವ್ಯವಸ್ಥೆಗಳ ಮೂಲಕ ನಿರ್ವಹಿಸುವ ಮನೋಭಾವ ಹೆಚ್ಚುತ್ತಿರುವುದು ವಿಷಾದನೀಯ.

ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ “ನಿಯೋಜನೆ” ಎಂಬ ಪದದ ಅರ್ಥವನ್ನೇ ಕ್ರಮೇಣ ಬದಲಾಯಿಸಲಾಗುತ್ತಿದೆ ಎಂಬ ಭಾವನೆ ಶಿಕ್ಷಣ ವಲಯದಲ್ಲಿ ಗಟ್ಟಿಯಾಗಿ ಮೂಡುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಬೇಕಾದ ನಿಯೋಜನೆ ಕ್ರಮ ಇಂದು ಸಾಮಾನ್ಯ ಆಡಳಿತ ಕ್ರಮವಾಗಿ ರೂಪಾಂತರಗೊಳ್ಳುತ್ತಿದೆ. ಇದು ಉಪನ್ಯಾಸಕರ ಸೇವಾ ಭದ್ರತೆ, ವೃತ್ತಿಪರ ಗೌರವ ಹಾಗೂ ಶಿಕ್ಷಣದ ಮೌಲ್ಯಗಳ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತಿದೆ.

ಶಿಕ್ಷಣ ವ್ಯವಸ್ಥೆಯ ಬಲ ಕಟ್ಟಡಗಳಿಂದಲ್ಲ, ಸಮರ್ಪಿತ ಶಿಕ್ಷಕರಿಂದ ನಿರ್ಮಾಣವಾಗುತ್ತದೆ. ಒಬ್ಬ ಉಪನ್ಯಾಸಕರನ್ನು ಕೇವಲ “ಗಂಟೆ ಪೂರೈಸುವ ಸಿಬ್ಬಂದಿ” ಎಂದು ಪರಿಗಣಿಸುವ ಕ್ಷಣದಿಂದಲೇ ಶಿಕ್ಷಣ ತನ್ನ ಆತ್ಮವನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಶಿಕ್ಷಕರನ್ನು ಬೋಧನಾ ಗಂಟೆಗಳ ಲೆಕ್ಕಾಚಾರಕ್ಕೆ ಇಳಿಸುವ ವ್ಯವಸ್ಥೆ ಅಂತಿಮವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನೇ ದುರ್ಬಲಗೊಳಿಸುತ್ತದೆ. ಆದ್ದರಿಂದ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ “ಒಂದು ವಿಷಯಕ್ಕೆ ಒಬ್ಬ ಉಪನ್ಯಾಸಕ” ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಪನ್ಯಾಸಕರ ನೇಮಕಾತಿ ಗಂಟೆಗಳ ಲೆಕ್ಕ ಅಥವಾ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲ; ವಿಷಯದ ಅಸ್ತಿತ್ವ, ಶಿಕ್ಷಣದ ಅಗತ್ಯ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಡೆಯಬೇಕು. ವಿಷಯ ಉಳಿದರೆ ಮಾತ್ರ ಜ್ಞಾನ ಉಳಿಯುತ್ತದೆ; ಜ್ಞಾನ ಉಳಿದರೆ ಮಾತ್ರ ಶಿಕ್ಷಣ ವ್ಯವಸ್ಥೆ ಬಲವಾಗುತ್ತದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಕಾರ್ಯಭಾರ ಎಂಬ ಪರಿಕಲ್ಪನೆಯನ್ನು ಮರುಪರಿಶೀಲಿಸುವ ಅಗತ್ಯ ಇಂದು ಅತ್ಯಂತ ತುರ್ತಾಗಿದೆ. ಕಾರ್ಯಭಾರವನ್ನು ಕೇವಲ ಗಂಟೆಗಳ ಲೆಕ್ಕವಾಗಿ ನೋಡದೆ, ಶಿಕ್ಷಣದ ಗುಣಮಟ್ಟ, ವಿಷಯದ ಅಗತ್ಯ, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶಿಕ್ಷಣ ಸಂಸ್ಥೆಗಳ ಸ್ಥಿರತೆಯ ದೃಷ್ಟಿಯಿಂದ ಪರಿಗಣಿಸಬೇಕು. ಶಾಶ್ವತ ನೇಮಕಾತಿ ಮತ್ತು ನ್ಯಾಯಸಮ್ಮತ ನೀತಿಗಳ ಮೂಲಕ ಮಾತ್ರ ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸಬಹುದು.

✍️ಜೇಸಿ ಮೋಹನ್ ಚಂದ್ರ ತೋಟದ ಮನೆ, ಹವ್ಯಾಸಿ ಬರಹಗಾರರು

 

Leave a Reply

error: Content is protected !!