ಅನುದಾನಿತ, ಸರ್ಕಾರಿ ಉಪನ್ಯಾಸಕರನ್ನು ಕಾರ್ಯಭಾರ ಕೊರತೆ ಹೆಸರಿನಲ್ಲಿ ಎರಡು ಕಾಲೇಜುಗಳಿಗೆ ನಿಯೋಜನೆ ಮಾಡುವ ಕ್ರಮ ರದ್ದುಪಡಿಸಲು ಸರ್ಕಾರವನ್ನು ಒತ್ತಾಯಿಸಿದ ಎಸ್. ಎಲ್. ಭೋಜೇಗೌಡ







ಮಂಗಳೂರು: ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅನುದಾನಿತ ನೌಕರರ ಸಂಘ (ರಿ.) ಮಂಗಳೂರು ಹಾಗೂ ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ (ರಿ.) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಅನುದಾನಿತ ನೌಕರರ ಶೈಕ್ಷಣಿಕ ಸಮಾವೇಶವು ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಉದ್ಘಾಟಿಸಿ ಮಾತನಾಡಿ, ಪದವಿ ಪೂರ್ವ ಕಾಲೇಜುಗಳ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಭಾರ ಕೊರತೆ ಹೆಸರಿನಲ್ಲಿ ಉಪನ್ಯಾಸಕರನ್ನು ಬೇರೆ ಕಾಲೇಜುಗಳಿಗೆ ನಿಯೋಜಿಸುವ ಪದ್ಧತಿಯನ್ನು ರದ್ದುಪಡಿಸುವ ಬೇಡಿಕೆ ಸೇರಿದಂತೆ, ಅನುದಾನಿತ ಉಪನ್ಯಾಸಕರನ್ನು ಹುದ್ದೆಯಿಂದ ವಿಮುಕ್ತಿಗೊಳಿಸುವ ನಿಯಮವನ್ನೂ ರದ್ದುಪಡಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಹಾಗೆಯೇ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕಿ ರಾಜೇಶ್ವರಿ ಎಂ. ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಇನ್ನಷ್ಟು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ನಿಂಗೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಕಾರ್ಯಭಾರ ಕೊರತೆ ಹೆಸರಿನಲ್ಲಿ ಉಪನ್ಯಾಸಕರನ್ನು ಮೂರು ದಿನಗಳ ಕಾಲ ಬೇರೆ ಕಾಲೇಜುಗಳಿಗೆ ನಿಯೋಜಿಸುವ ಕ್ರಮ ಹಾಗೂ 320 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕ ಹುದ್ದೆ ಎಂಬ ಅವೈಜ್ಞಾನಿಕ ನಿಯಮಗಳು ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ಶೈಕ್ಷಣಿಕ ವ್ಯವಸ್ಥೆಗೆ ಹೊಡೆತ ನೀಡುತ್ತಿವೆ ಎಂದು ಹೇಳಿದರು. ಇದರಿಂದ ಗ್ರಾಮೀಣ ಭಾಗದ, ಬಡ ಹಾಗೂ ದುರ್ಬಲ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ ಎಂದರು.
ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ. ನವೀನ್ ಶೆಟ್ಟಿ ಕೆ. ಸೇರಿದಂತೆ ವಿವಿಧ ಶಿಕ್ಷಕ ಹಾಗೂ ಉಪನ್ಯಾಸಕ ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುದಾನಿತ ಸಂಸ್ಥೆಗಳಿಂದ ಜಿಲ್ಲೆಯ ಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೂ ಅಭಿನಂದನಾ ಸನ್ಮಾನ ನಡೆಯಿತು.
ಸರ್ಕಾರಿ ಉಪನ್ಯಾಸಕರ ನಿಯೋಜನೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರಿ ಉಪನ್ಯಾಸಕರ ಪರವಾಗಿ ಉಪನ್ಯಾಸಕ ವಿದ್ಯಾಧರ್ ಮಾಹಿತಿ ನೀಡಿದರು. ಅನುದಾನಿತ ಸಂಸ್ಥೆಗಳ ಉಪನ್ಯಾಸಕರ ಸಮಸ್ಯೆಗಳ ಕುರಿತು ಪ್ರಾಂಶುಪಾಲ ವಿಠ್ಠಲ್ ಹಾಗೂ ಅತಿಥಿ ಉಪನ್ಯಾಸಕರ ಸಂಘದ ಬೇಡಿಕೆಗಳ ಕುರಿತು ಉಪನ್ಯಾಸಕ ಪದ್ಮಪ್ರಭ ಇಂದ್ರ ಸಭೆಗೆ ಮಾಹಿತಿ ನೀಡಿದರು.
ಪೂರ್ವಾಹ್ನ ಪ್ರಸ್ತುತ ನಿಯಮಗಳ ಪ್ರಕಾರ ಕಾರ್ಯಭಾರ ಕೊರತೆ ಇರುವ ಅನುದಾನಿತ ಉಪನ್ಯಾಸಕರನ್ನು ಮೂರು ದಿನಗಳ ಕಾಲ ಬೇರೆ ಕಾಲೇಜುಗಳಿಗೆ ನಿಯೋಜಿಸುವ ಪ್ರಕ್ರಿಯೆ ಉಪನಿರ್ದೇಶಕರ ಮಾರ್ಗದರ್ಶನದಂತೆ ಕಚೇರಿ ಸಿಬ್ಬಂದಿ ನಿತೀನ್ ಅವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ 25ಕ್ಕೂ ಹೆಚ್ಚು ಉಪನ್ಯಾಸಕರನ್ನು ವಿವಿಧ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿಯೋಜಿಸಲಾಯಿತು.
ಹಾಗೆಯೇ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅನುದಾನಿತ ನೌಕರರ ಸಂಘದ ಅಧ್ಯಕ್ಷರಾದ ಸೋಮಶೇಖರ ನಾಯಕ್ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ , ಜಯಪ್ರಕಾಶ್ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ರವಿಕುಮಾರ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 300ಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


