ಶಿಕ್ಷಕಿಯಾಗುವ ಕನಸು ಕಂಡವರಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವ ಐಐಸಿಟಿ – ನೀಲಾವತಿ ಶಿವರಾಮ್.ಎಂ.ಎಸ್







ನೆಲ್ಯಾಡಿ: ಕಡಬದ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ಆಶ್ರಯದಲ್ಲಿ, ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್ಒ 9001:2015 ಮಾನ್ಯತೆ ಪಡೆದ ಐಐಸಿಟಿ ಶಿಕ್ಷಣ ಸಂಸ್ಥೆಯ ಮೊಂಟೆಸ್ಸರಿ (ನರ್ಸರಿ) ಟೀಚರ್ ಟ್ರೈನಿಂಗ್ ಶಿಕ್ಷಕಿಯರ ಪದವಿ ಪ್ರಧಾನ ಸಮಾರಂಭ ಭಾನುವಾರ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಡಬ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷೆ ನೀಲಾವತಿ ಶಿವರಾಮ್ ಎಂ.ಎಸ್ ಅವರು ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದ ಅವರು ನಗರ ಪ್ರದೇಶಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಮಾದರಿಯಲ್ಲೇ ಕಡಬದಂತಹ ಗ್ರಾಮೀಣ ಪ್ರದೇಶದಲ್ಲಿಯೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಶಿಕ್ಷಕಿಯರ ಹುದ್ದೆ ಅತ್ಯಂತ ಗೌರವಯುತ ಹಾಗೂ ಜವಾಬ್ದಾರಿಯುತವಾದದ್ದು. ಶಿಕ್ಷಕಿಯಾಗಬೇಕೆಂಬ ಕನಸು ಹೊತ್ತವರಿಗೆ ಐಐಸಿಟಿ ಶಿಕ್ಷಣ ಸಂಸ್ಥೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಿದೆ ಎಂದು ಅವರು ಶ್ಲಾಘಿಸಿದರು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರ ಆತ್ಮವಿಶ್ವಾಸ, ಅವರ ಅಭಿವ್ಯಕ್ತಿ ಹಾಗೂ ಶಿಕ್ಷಣದ ಗುಣಮಟ್ಟ ನೋಡಿದಾಗ ಸಂಸ್ಥೆ ನೀಡುತ್ತಿರುವ ತರಬೇತಿಯ ಮಟ್ಟ ಸ್ಪಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ವ್ಯವಹಾರಿಕ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೂ, ಕಡಿಮೆ ಶುಲ್ಕದಲ್ಲಿ ಅನುಭವಿ ಹಾಗೂ ನುರಿತ ಶಿಕ್ಷಕರಿಂದ ಸಮರ್ಪಕ ತರಬೇತಿ ನೀಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದು ಹೇಳಿದರು.

ಈ ಸಂಸ್ಥೆಯಲ್ಲಿ ಪದವಿ ಪಡೆದ ಅನೇಕ ವಿದ್ಯಾರ್ಥಿನಿಯರು ಈಗಾಗಲೇ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉದ್ಯೋಗ ಪಡೆಯುತ್ತಿರುವುದು ಸಂಸ್ಥೆಯ ಸಾಧನೆಯಾಗಿದೆ. ಶಿಕ್ಷಕಿಯಾಗಬೇಕೆಂಬ ಕನಸು ಹೊಂದಿರುವವರು ಈ ಸಂಸ್ಥೆಗೆ ಸೇರ್ಪಡೆಗೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ಹೇಳಿದ ಅವರು, ಪದವಿ ಪಡೆದ ಎಲ್ಲ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್ ಸಿ.ಎಚ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದ್ದರೂ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡುವಾಗ ನೀಡಿದ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು. ಪ್ರತಿ ವರ್ಷ ಹೊಸ ಹೊಸ ವಿಷಯಗಳನ್ನು ಸೇರ್ಪಡೆಗೊಳಿಸುವ ಮೂಲಕ ಶಿಕ್ಷಕಿಯಾಗಬೇಕೆಂಬ ಕನಸು ಹೊಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಉತ್ತಮ ಶಿಕ್ಷಕಿಯಾಗಿ ರೂಪಿಸುವುದು ಹಾಗೂ ಅವರಿಗೆ ಉತ್ತಮ ಉದ್ಯೋಗ ದೊರಕಿಸುವುದೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂಸ್ಥೆಯ ಗುಣಮಟ್ಟ ಹಾಗೂ ಜನರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಮುಂದಿನ ಬ್ಯಾಚ್‌ಗಳ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿರುವವರಿಗೆ ಎಲ್ಲಾ ರೀತಿಯ ಸಹಕಾರವನ್ನು ಸಂಸ್ಥೆ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಪ್ರಥಮ ಸ್ಥಾನ ಪಡೆದ ಜಯಶ್ರೀ ಹಾಗೂ ದ್ವಿತೀಯ ಸ್ಥಾನ ಪಡೆದ ಫಾತಿಮಾತ್ ನಿಶಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಉಪಪ್ರಾಂಶುಪಾಲೆ ಅನಿತಾ ಸ್ವಾಗತಿಸಿದರು. ಉಪನ್ಯಾಸಕಿ ಸುಶ್ಮಿತಾ ಅತಿಥಿಗಳ ಪರಿಚಯವನ್ನು ವಾಚಿಸಿದರು, ಉಪನ್ಯಾಸಕಿ ಭಾಗ್ಯಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿ ನವ್ಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.


