






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ನದಿಗೆ ಸ್ನಾನಕ್ಕೆ ತೆರಳಿದ್ದ ವೃದ್ಧರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 24ರಂದು ಸಂಜೆ ಸಂಭವಿಸಿದೆ.
ಮೃತರನ್ನು ಕೊಣಾಜೆ ಗ್ರಾಮದ ಸುಬ್ರಮಣ್ಯ (70) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದು ವರ್ಷದಿಂದ ಕಡಬದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮೇ 24ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಸುಬ್ರಮಣ್ಯ ಅವರು ಪ್ರತಿದಿನದ ಅಭ್ಯಾಸದಂತೆ ಸಂಜೆ ಸುಮಾರು 5.45ರ ವೇಳೆಗೆ ಮನೆಯ ಸಮೀಪದ ನದಿಗೆ ಸ್ನಾನಕ್ಕೆ ತೆರಳಿದ್ದರು. ಆದರೆ ಸಾಕಷ್ಟು ಸಮಯವಾದರೂ ಮನೆಗೆ ಮರಳಿ ಬಾರದ ಹಿನ್ನೆಲೆ ಪತ್ನಿ ಪರಮೇಶ್ವರಿ ಅವರು ಮಗ ಧರ್ಮರಾಜ್ ಅವರಿಗೆ ನದಿ ಕಡೆಗೆ ಹೋಗಿ ನೋಡಲು ತಿಳಿಸಿದ್ದಾರೆ.
ಧರ್ಮರಾಜ್ ಅವರು ನದಿ ಬಳಿ ತೆರಳಿ ನೋಡಿದಾಗ ಸುಬ್ರಮಣ್ಯ ಅವರು ನೀರಿನಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿ ಕೈಕಾಲು ಬಡಿದಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಸ್ನೇಹಿತರಾದ ಶಿವರಾಜ್, ಮಣಿ ಹಾಗೂ ಇತರರ ಸಹಾಯದಿಂದ ಅವರನ್ನು ನದಿಯಿಂದ ಮೇಲಕ್ಕೆತ್ತಿ ಅಂಬ್ಯುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಪತ್ನಿ ಪರಮೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


