ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 37 ವರ್ಷ ಸೇವೆ ಸಲ್ಲಿಸಿದ ವಿಜಯ ಕುಮಾರಿಗೆ ಭಾವಪೂರ್ಣ ಬೀಳ್ಕೊಡುಗೆ

ಶೇರ್ ಮಾಡಿ

 

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜುಯಲ್ಲಿ ಸುಮಾರು 37 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ಮೇ.30ರಂದು ನಿವೃತ್ತಿ ಹೊಂದಲಿರುವ ಕಾಲೇಜು ಕಚೇರಿಯ ಪ್ರಥಮ ದರ್ಜೆ ಸಹಾಯಕಿ ವಿಜಯ ಕುಮಾರಿ ಅವರಿಗೆ ಮೇ.26ರಂದು ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿಜಯ ಕುಮಾರಿ ಅವರ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯ ಕುಮಾರಿ ಮಾತನಾಡಿ, ವಿಜಯ ಕುಮಾರಿ ಅವರ ವೃತ್ತಿ ಜೀವನ ಕಿರಿಯ ಸಿಬ್ಬಂದಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಲಕ್ಷ್ಮೀಶ್ ಭಟ್ ಮಾತನಾಡಿ, ಅವರ ಕಾರ್ಯತತ್ಪರತೆ ಹಾಗೂ ಕರ್ತವ್ಯನಿಷ್ಠೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕಾಲೇಜಿನ ಕಚೇರಿ ಸಿಬ್ಬಂದಿ ರಂಜಿತಾ.ಎಂ ಮಾತನಾಡಿ, ಎಲ್ಲರಿಗೂ ಸಹಾಯ ಮಾಡುವ ಮನೋಭಾವ ಹೊಂದಿದ್ದ ವಿಜಯಕ್ಕನ ಮಾರ್ಗದರ್ಶನ ಅವಿಸ್ಮರಣೀಯ. ನೇರ ನುಡಿಯೊಂದಿಗೆ ನೀಡುತ್ತಿದ್ದ ಸಲಹೆಗಳು ಸದಾ ನೆನಪಿನಲ್ಲಿ ಉಳಿಯಲಿವೆ ಎಂದು ಹೇಳಿದರು. ಬೋಧಕೇತರ ಸಿಬ್ಬಂದಿಗಳ ಸೇವೆ ತೆರೆಮರೆಯಲ್ಲಿದ್ದರೂ ಅಮೂಲ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜುದ ಕಚೇರಿ ಪ್ರಬಂಧಕ ದಿವಾಕರ ಪಟವರ್ಧನ್ ಮಾತನಾಡಿ, ವಿಜಯ ಕುಮಾರಿ ಅವರು ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಅವಿನಾಭಾವ ಬಾಂಧವ್ಯ ಬೆಳೆಸಿಕೊಂಡಿದ್ದರು ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್, ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ್ ಪಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಡಾ.ರಾಜೇಶ್ ಬಿ ಅವರು ವಿಜಯ ಕುಮಾರಿ ಅವರ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ವಿಜಯ ಕುಮಾರಿ ಅವರು, ಸಂಸ್ಥೆಯೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ನೆನಪಿಸಿಕೊಂಡರು. ದಿವಂಗತ ಪ್ರೊ.ಎಸ್.ಪ್ರಭಾಕರ್ ಹಾಗೂ ಡಾ.ಬಿ.ಯಶೋವರ್ಮ ಅವರ ಮಾರ್ಗದರ್ಶನವನ್ನು ಸ್ಮರಿಸಿ, “ಬದುಕು ಕಟ್ಟಿಕೊಟ್ಟ ಸಂಸ್ಥೆ ಈ ಕಾಲೇಜು. ಅದಕ್ಕೆ ನಾನು ಸದಾ ಚಿರಋಣಿ” ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಜಿ.ಆರ್. ಭಟ್, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಸೌಮ್ಯ ಬಿ.ಪಿ., ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಯುವರಾಜ್ ಪೂವಣಿ ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಂಘದ ಕಾರ್ಯದರ್ಶಿ ಸೀಮಾ ಪಿ ಸ್ವಾಗತಿಸಿ, ಪದವಿ ಕಾಲೇಜಿನ ಕಚೇರಿ ಸಿಬ್ಬಂದಿ ಅಜಯ್ ರಾಜ್ ವಂದಿಸಿದರು. ಗ್ರಂಥಾಲಯ ಸಹಾಯಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

error: Content is protected !!