ರಾತ್ರಿ ಬೀಟ್ ಪೊಲೀಸರ ಮೇಲೆ ಹಲ್ಲೆ; ಕೇರಳಕ್ಕೆ ಪರಾರಿಯಾಗಿದ್ದ ಅರಸಿನಮಕ್ಕಿಯ ಸಚಿನ್ ಹಾಗೂ ನೆಲ್ಯಾಡಿಯ ಚಂದನ್ ಬಂಧನ

ಶೇರ್ ಮಾಡಿ

 

ರಾತ್ರಿ ಬೀಟ್ ಪೊಲೀಸರ ಮೇಲೆ ಹಲ್ಲೆ; ಕೇರಳಕ್ಕೆ ಪರಾರಿಯಾಗಿದ್ದ ಅರಸಿನಮಕ್ಕಿಯ ಸಚಿನ್ ಹಾಗೂ ನೆಲ್ಯಾಡಿಯ ಚಂದನ್ ಬಂಧನ

ಮಂಗಳೂರು: ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಸಿಮೆಂಟ್ ಶೀಟ್ ತುಂಡಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಕೇರಳ ರಾಜ್ಯದ ಕಾಂಞಿಗಾಡ್ ಪ್ರದೇಶದಲ್ಲಿ ಬಂಧಿಸಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಮೇ 24ರ ಬೆಳಗಿನ ಜಾವ ಸುಮಾರು 2.10 ಗಂಟೆ ವೇಳೆಗೆ ಘಟನೆ ನಡೆದಿತ್ತು. ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕಲ್ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಯುವಕರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸಿಮೆಂಟ್ ಶೀಟ್ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿದ್ದನು. ಪರಿಣಾಮವಾಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ತಲೆಗೆ ಗಾಯಗಳಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆ ಅ.ಕ್ರ.57/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 121(1), 109, 132, 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ನಗರ ಸಿಸಿಬಿ ಪೊಲೀಸರು ತನಿಖೆ ನಡೆಸಿ, ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಕೃತ್ಯ ಎಸಗಿದ ಆರೋಪಿಗಳನ್ನು ಮೇ 26ರಂದು ಕೇರಳದ ಕಾಂಞಿಗಾಡ್ ಪ್ರದೇಶದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಹತ್ಯಡ್ಕ ನಿವಾಸಿ ಸಚಿನ್ ಕೆ ಆರ್(24) ಹಾಗೂ ಪುತ್ತೂರು ತಾಲೂಕು ನೆಲ್ಯಾಡಿ ಮಣ್ಣಗುಂಡಿ ನಿವಾಸಿ ಚಂದನ್(24) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸಚಿನ್ ಕೆ.ಆರ್ ಕುಂಟಿಕಾನದ “ಪಾನ್ ಪಾನ್ ಸ್ವೀಟ್ಸ್” ಫ್ಯಾಕ್ಟರಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರೆ, ಚಂದನ್ ಕೂಳೂರಿನ ಅದ್ವೈತ್ ಕಿಯಾ ಶೋರೂಮ್‌ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಮಧ್ಯರಾತ್ರಿ ವೇಳೆ ಸುತ್ತಾಡುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಆರೋಪಿಗಳು ಪೊಲೀಸರ ಮೇಲೆ ಸಿಮೆಂಟ್ ಶೀಟ್ ತುಂಡಿನಿಂದ ಹಲ್ಲೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕೃತ್ಯಕ್ಕೆ ಬಳಸಿದ್ದ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣದ ತನಿಖೆ ಮುಂದುವರಿದಿದೆ.

 

Leave a Reply

error: Content is protected !!