‘ಸ್ಪಷ್ಟ ಗುರಿಯೊಂದಿಗೆ ವಿದ್ಯಾರ್ಥಿಗಳು ಸಾಧನೆಗೈಯಬೇಕು’ – ಅಬ್ರಹಾಂ ವರ್ಗೀಸ್







ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಬುಧವಾರ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಂಭ್ರಮ ಹಾಗೂ ವೈಭವದಿಂದ ನಡೆಯಿತು.ಬೆಳಿಗ್ಗೆ 10.30ಕ್ಕೆ ಆರಂಭವಾದ ಸಭಾ ಕಾರ್ಯಕ್ರಮವು ವಿಶ್ವವಿದ್ಯಾನಿಲಯ ಕಾಲೇಜಿನ ಸಂಯೋಜಕ ಡಾ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಕಾಲೇಜಿನ ವಾರ್ಷಿಕ ಮ್ಯಾಗಜೀನ್ ‘ತಳಿರು’ವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪಷ್ಟ ಉದ್ದೇಶ ಮತ್ತು ಗುರಿಗಳೊಂದಿಗೆ ನಿರಂತರ ಪರಿಶ್ರಮ ಪಡಬೇಕು. ಸಾಹಿತ್ಯ ಹಾಗೂ ವೈಚಾರಿಕ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರೀತಿ, ಸೌಹಾರ್ದತೆಯೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ವೇಳೆ ಕಾಲೇಜು ಆರಂಭದ ದಿನಗಳ ಸಂಕಷ್ಟಗಳನ್ನು ಸ್ಮರಿಸಿದರು.
ಕಾಲೇಜು ಅನುಷ್ಠಾನ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿ, ಗ್ರಾಮೀಣ ಭಾಗದಲ್ಲಿ ಕಾಲೇಜಿನ ಉಳಿವಿನ ಅಗತ್ಯತೆಯನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಅನುಷ್ಠಾನ ಸಮಿತಿಯ ಗೌರವ ಸಲಹೆಗಾರ ಪಿ.ಪಿ. ವರ್ಗೀಸ್ ಮಾತನಾಡಿ, ಕಾಲೇಜಿನ ಸಾಧನೆಗಳನ್ನು ಉಲ್ಲೇಖಿಸಿ, ಭವಿಷ್ಯದಲ್ಲಿಯೂ ವಿಶ್ವವಿದ್ಯಾನಿಲಯ ಕಾಲೇಜು ಯಶಸ್ವಿಯಾಗಿ ಮುಂದುವರಿಯುವಂತೆ ಪ್ರಯತ್ನ ನಡೆಸಲಾಗುವುದು ಎಂದರು.
ಕೊಕ್ಕಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ಮಾತನಾಡಿ, ಸರ್ಕಾರಿ ಕಾಲೇಜುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಏಲಿಯಾಸ್ ಎಂ.ಕೆ. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಳನ್ನು ಮೆಚ್ಚಿ ಶುಭ ಹಾರೈಸಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಉಮ್ಮರ್ ಬೈಲಂಗಡಿ ಕಾಲೇಜಿನ ಉಳಿವಿನ ಅಗತ್ಯತೆಯನ್ನು ಪ್ರಸ್ತಾಪಿಸಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಅನುಷ್ಠಾನ ಸಮಿತಿಯ ಗೌರವ ಸಲಹೆಗಾರ ಸರ್ವೋತ್ತಮ ಗೌಡ, ಕೋಶಾಧಿಕಾರಿ ವಿಶ್ವನಾಥ್ ಶೆಟ್ಟಿ, ಸದಸ್ಯ ಸತೀಶ್ ಕೆ.ಎಸ್ ದುರ್ಗಾಶ್ರೀ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಸೇಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಡಾ.ಸೀತಾರಾಮ ಪಿ. ಸ್ವಾಗತಿಸಿದರು. ಡಾ.ಆನಂದ ಎಂ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಶ್ರುತಿ ಹಾಗೂ ವೆರೋನಿಕಾ ಪ್ರಭಾ ವಿ.ಪಿ. ಕಾರ್ಯಕ್ರಮ ನಿರೂಪಿಸಿದರು. ಪಾವನಾ ರೈ ವಂದಿಸಿದರು.
ಮಧ್ಯಾಹ್ನ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ಅನುಷ್ಠಾನ ಸಮಿತಿಯ ಪದಾಧಿಕಾರಿಗಳು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


