ನೆಲ್ಯಾಡಿಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಶೇರ್ ಮಾಡಿ

20 ಮಂದಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಶಿಫಾರಸು, 80 ಮಂದಿಗೆ ಕನ್ನಡಕ ವಿತರಣೆ

 

ನೆಲ್ಯಾಡಿಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ನೆಲ್ಯಾಡಿ : ಲಯನ್ಸ್ ಕ್ಲಬ್ ಅಲಂಕಾರು ದುರ್ಗಾಂಬಾ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜಿಯನ್, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕಟ್ಟೆ ಮಜಲು ಕೌಕ್ರಾಡಿ ಇವರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇಂತಹ ಶಿಬಿರಗಳು ವರದಾನವಾಗಿವೆ. ಮನೆ ಬಾಗಿಲಿಗೆ ಬಂದು ಸೇವೆ ನೀಡುವ ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಾಯ ಬೆಳ್ತಂಗಡಿ ಇದರ ಮುಖ್ಯಗುರು ಮಹಾಲಿಂಗ ಪಡೆಬೆಟ್ಟು ಮಾತನಾಡಿ, ಸೇವೆಯನ್ನು ಕರ್ತವ್ಯ ಎನ್ನುವ ಮನೋಭಾವದಿಂದ ಮಾಡಿದಾಗ ಅದು ಅರ್ಥಪೂರ್ಣವಾಗುತ್ತದೆ. ಸಮಾಜದಿಂದ ನಾವು ಬಹಳಷ್ಟು ಪಡೆದುಕೊಂಡಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. 61ನೇ ನೇತ್ರ ಚಿಕಿತ್ಸಾ ಶಿಬಿರವನ್ನು ಸಂಘಟಿಸಿರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಗಂಗಾಧರ ಶೆಟ್ಟಿ ಹೊಸಮನೆ ಅವರ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ನಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತು, ಲಯನ್ಸ್ ಕ್ಲಬ್ ಅಲಂಕಾರು ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸವಿತಾ ಸರ್ವೋತ್ತಮ ಗೌಡ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಮಾರ್ಷಲ್ ಡಿಸೋಜ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಅಧ್ಯಕ್ಷ ಉಲಹನ್ನನ್. ಪಿ.ಎಂ ಮಾತನಾಡಿ ಜನಪರ ಸೇವಾ ಕಾರ್ಯಗಳನ್ನು ಸಂಘ ಸಂಸ್ಥೆಗಳು ಪ್ರಾಮಾಣಿಕವಾಗಿ ನಡೆಸಿದಾಗ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಈ ಶಿಬಿರ ಅಂಧರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಅವರನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ, ಸ್ಮರಣಿಕೆ ಹಾಗೂ ಹಣ್ಣುಹಂಪಲು ನೀಡಿ ಸನ್ಮಾನಿಸಲಾಯಿತು.

ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ನೇತ್ರ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ 20 ಮಂದಿಯನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದ್ದು, 80 ಮಂದಿಗೆ ಸ್ಥಳದಲ್ಲಿಯೇ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ನೇತ್ರಾಧಿಕಾರಿ ಸುಮನ ಅವರು ಉಚಿತ ಪೊರೆ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ವೆನ್ಲಾಕ್ ಆಸ್ಪತ್ರೆಯ ನೇತ್ರ ತಜ್ಞ ಡಾ.ನಿತ್ಯ ಅವರು ಶಿಬಿರಾರ್ಥಿಗಳ ನೇತ್ರ ತಪಾಸಣೆ ನಡೆಸಿದರು.

61ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ವಂದಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕ ಅಧಿಕಾರಿ ಲೀನಾ ಪ್ರಾರ್ಥಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಶಿಬಿರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

 

Leave a Reply

error: Content is protected !!