






ಬೆಳ್ತಂಗಡಿ: ತಾಲೂಕಿನಲ್ಲಿ ಕಾಡಾನೆ ದಾಂಧಲೆ ಮುಂದುವರಿಯುತ್ತಿದ್ದು ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಮೇ.31 ರಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಮಲವಂತಿಗೆ ಗ್ರಾಮದ ದಿಡುಪೆಯ ನೆಕ್ಕಿಲೊಟ್ಟು ನಾರಾಯಣ ಗೌಡ ಎಂಬುವರು ಸ್ಥಳೀಯ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ತನ್ನ ಮನೆಗೆ ದ್ವಿಚಕ್ರ ವಾಹನದೊಂದಿಗೆ ಹಿಂದಿರುಗುತ್ತಿದ್ದ ವೇಳೆ ರಾತ್ರಿ 8:45ಕ್ಕೆ ನೆಲ್ಯಡ್ಕ ರಸ್ತೆ ಬಳಿ ಒಂಟಿ ಸಲಗವೊಂದು ಎದುರಾಗಿದ್ದು ಕಾಡಾನೆ ಏಕಾಏಕಿ ವಾಹನದ ಮೇಲೆ ಎರಗಿ ಸ್ಕೂಟರ್‌ನ್ನು ಜಖಂಗೊಳಿಸಿದೆ.
ಆನೆ ಎದುರಾಗುತ್ತಿದ್ದಂತೆ ಬೈಕ್ ಸವಾರ ಸ್ಥಳದಲ್ಲೇ ವಾಹನ ಬಿಟ್ಟು ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಮಳೆ ಸುರಿದ ಕಾರಣದಿಂದ ಕತ್ತಲ ವಾತವರಣದಲ್ಲಿ ರಸ್ತೆಯಲ್ಲಿ ಕಾಡಾನೆ ಇರುವುದು ವಾಹನದ ಬೆಳಕಿನ ಪ್ರಕಾಶದಿಂದ ಸರಿಯಾಗಿ ಗೋಚರಿಸದೆ ಸುಮಾರು 10 ಅಡಿ ಅಂತರದಲ್ಲಿ ಕಾಡಾನೆ ನಾರಾಯಣ ಗೌಡರಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಭಯದಿಂದ ಓಡಿ ಹೋಗಿದ್ದಾರೆ. ಆನೆ ಸ್ಕೂಟರ್ ಮೇಲೆ ತನ್ನ ಗಜ ಹೆಜ್ಜೆಯನ್ನು ಇರಿಸಿ ವಾಹನವನ್ನು ಹಾನಿಗೊಳಿಸಿದೆ.


