ಯುವಕನ ಹತ್ಯೆ : ಮೂವರ ವಿರುದ್ಧ ಪ್ರಕರಣ ದಾಖಲು

ಶೇರ್ ಮಾಡಿ

 

ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಪ್ರದೇಶದಲ್ಲಿ ಅಪರಿಚಿತ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರು ವ್ಯಕ್ತಿಗಳ ವಿರುದ್ಧ ಹತ್ಯೆ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪಿರ್ಯಾದಿದಾರರಾದ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ನಿತಿನ್ (34) ಅವರು ನೀಡಿದ ದೂರಿನ ಪ್ರಕಾರ, ಜೂ.1ರಂದು ಬೆಳಿಗ್ಗೆ ಅವರಿಗೆ ವಾಟ್ಸಾಪ್ ಮೂಲಕ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆಯಲ್ಲಿ ಅಪರಿಚಿತ ಮೃತದೇಹವೊಂದು ಇರುವ ಕುರಿತು ಭಾವಚಿತ್ರ ಸಹಿತ ಮಾಹಿತಿ ಬಂದಿತ್ತು. ಭಾವಚಿತ್ರವನ್ನು ಪರಿಶೀಲಿಸಿದ ವೇಳೆ ಮೃತ ವ್ಯಕ್ತಿ ತಮ್ಮ ಸಹೋದರ ಯತೀಶ್ (33) ಎಂಬುದು ದೃಢಪಟ್ಟಿದೆ.

ಬಳಿಕ ಪಿರ್ಯಾದಿದಾರರು ಘಟನಾ ಸ್ಥಳಕ್ಕೆ ತೆರಳಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂ.1ರಂದು ಬೆಳಿಗ್ಗಿನ ವೇಳೆಯಲ್ಲಿ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಅವರು ಯತೀಶ್ ಅವರಿಗೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳ ಹಲ್ಲೆಯಿಂದಲೇ ಯತೀಶ್ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

 

Leave a Reply

error: Content is protected !!