ನೆಲ್ಯಾಡಿ: ಪಿಎಂಶ್ರೀ ಶಾಲೆಯಲ್ಲಿ ₹21.70 ಲಕ್ಷ ವೆಚ್ಚದ ನೂತನ ಕೊಠಡಿ, ಬಾಲಕಿಯರ ಶೌಚಾಲಯ ಉದ್ಘಾಟನೆ

ಶೇರ್ ಮಾಡಿ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದೇ ಪಿಎಂಶ್ರೀ ಯೋಜನೆಯ ಗುರಿ-ಸಂಸದ ಬ್ರಿಜೇಶ್ ಚೌಟ

 

ನೆಲ್ಯಾಡಿ: ಪಿಎಂಶ್ರೀ ಶಾಲೆಯಲ್ಲಿ ₹21.70 ಲಕ್ಷ ವೆಚ್ಚದ ನೂತನ ಕೊಠಡಿ, ಬಾಲಕಿಯರ ಶೌಚಾಲಯ ಉದ್ಘಾಟನೆ

ನೆಲ್ಯಾಡಿ: ನೆಲ್ಯಾಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2024-25ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಹಾಗೂ ಪಿಎಂಶ್ರೀ ಯೋಜನೆಯಡಿ ₹17.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಶಾಲಾ ಕೊಠಡಿ, ₹4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಾಲಕಿಯರ ಶೌಚಾಲಯ ಹಾಗೂ ವಿದ್ಯಾರ್ಥಿ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಆಯ್ದ 14,500ಕ್ಕೂ ಅಧಿಕ ಶಾಲೆಗಳನ್ನು ಪಿಎಂಶ್ರೀ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯಗಳನ್ನು ಸಾಕಾರಗೊಳಿಸುವ ಮಾದರಿ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಳ್ಳಲಿದ್ದು, ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳನ್ನು ಬೆಳೆಸುವ ಸಮಗ್ರ ಶಿಕ್ಷಣವನ್ನು ನೀಡಲಿವೆ ಎಂದರು.

2022-23ರಿಂದ 2026-27ರವರೆಗಿನ ಐದು ವರ್ಷಗಳ ಅವಧಿಗೆ ₹27,360 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಭಾಗಿತ್ವ ಹೊಂದಿವೆ. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 20 ಪಿಎಂಶ್ರೀ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ನೆಲ್ಯಾಡಿ ಶಾಲೆಯೂ ಅವುಗಳಲ್ಲಿ ಒಂದಾಗಿದೆ. ಶಾಲೆಯ ಅಗತ್ಯ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಗುಣಮಟ್ಟದ ಹಾಗೂ ಸಮಗ್ರ ಶಿಕ್ಷಣ ಒದಗಿಸುವ ಉದ್ದೇಶದಿಂದ ಪಿಎಂಶ್ರೀ ಯೋಜನೆ ಆರಂಭಿಸಲಾಗಿದೆ. ಶಾಲೆಯ ಅಭಿವೃದ್ಧಿಗೆ ದಾನಿಗಳು, ಪೋಷಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಸಂಸ್ಕಾರಗಳನ್ನೂ ನೀಡುವ ಕಾರ್ಯ ನಡೆಯಬೇಕು. ನನ್ನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾದ ಈ ಶಾಲೆ ಮುಂದಿನ ದಿನಗಳಲ್ಲಿ ಮಾದರಿ ಶಾಲೆಯಾಗಿ ಬೆಳೆದು ಪ್ರಧಾನಮಂತ್ರಿಯವರ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲೂ ಉಲ್ಲೇಖಗೊಳ್ಳುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಎಲ್ ಕೆ ಜಿ , ಯುಕೆಜಿ ಹಾಗೂ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾವತಿಯಿಂದ ಬ್ಯಾಗ್ ಹಾಗೂ ದಾನಿಗಳು ನೀಡಿದ ಕೊಡೆಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನಕರ ಎಚ್., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ನೋಟರಿ ವಕೀಲ ಇಸ್ಮಾಯಿಲ್, ಸಮೂಹ ಸಂಪನ್ಮೂಲ ವ್ಯಕ್ತಿ ದೇವಕಿ, 75ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಾಧ್ಯಕ್ಷ ಬಾಣಕೃಷ್ಣ ಬಾಣಜಾಲು, ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್., ಎಸ್‌ಡಿಎಂಸಿ ಉಪಾಧ್ಯಕ್ಷೆ ನಸೀಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವೆಂಕಟ ವಳಂಬೆ, ರಾಕೇಶ್ ಕೆಡೆಂಜಿ, ಗಣೇಶ್ ಉದನಡ್ಕ , ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಇಚ್ಲಂಪಾಡಿ, ನೆಲ್ಯಾಡಿ-ಕೌಕ್ರಾಡಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ – ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶ್ರೀ, ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ರವಿಪ್ರಸಾದ್ ಶೆಟ್ಟಿ ಬಲ್ಯ, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಸಭಾ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ, ಯೋಗ ಹಾಗೂ ಕರಾಟೆ ಪ್ರದರ್ಶನಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ದೊರೆಯಿತು.

ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್. ಸ್ವಾಗತಿಸಿದರು. ಶಿಕ್ಷಕಿ ಮೇರಿ ವಂದಿಸಿದರು. ಶಿಕ್ಷಕ ವಿಮಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

error: Content is protected !!