







ನೆಲ್ಯಾಡಿ: ಟೀಮ್ ಸಿಂಧೂರ ಹಾಗೂ ಉಜ್ವಲ ಸಂಜೀವಿನಿ ಒಕ್ಕೂಟದ ವತಿಯಿಂದ ನೆಲ್ಯಾಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಜಂಟಿ ಸ್ವಚ್ಛತಾ ಕಾರ್ಯಕ್ರಮವು ಭಾನುವಾರದಂದು ನಡೆಯಿತು.
ಕುತ್ರಾಡಿ ಶಾಸ್ತಾರೇಶ್ವರ ದೇವಸ್ಥಾನದಿಂದ ಪಡುಬೆಟ್ಟು ಶಾಲೆಯವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ವೇಳೆ ಶಾಲೆಯ ಎದುರಿನ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ತುಂಬಿಕೊಂಡಿರುವುದು ಕಂಡುಬಂದಿದ್ದು, ದೇಶದ ಭವಿಷ್ಯವನ್ನು ರೂಪಿಸುವ ಶಾಲೆಯ ಮುಂಭಾಗದಲ್ಲೇ ಇಂತಹ ಪರಿಸ್ಥಿತಿ ಇರುವುದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಬಸ್ ನಿಲ್ದಾಣ, ಶಾಲೆಯ ಪರಿಸರ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಒಟ್ಟು 15 ಗೋಣಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ಮಹತ್ವವನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಂದ ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯ ನಡೆಸಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಟೀಮ್ ಸಿಂಧೂರ ನೆಲ್ಯಾಡಿ ಹಾಗೂ ಉಜ್ವಲ ಸಂಜೀವಿನಿ ಒಕ್ಕೂಟ ತೀರ್ಮಾನಿಸಿವೆ.
ಈ ಸಂದರ್ಭದಲ್ಲಿ ಟೀಮ್ ಸಿಂಧೂರ ನೆಲ್ಯಾಡಿ ಹಾಗೂ ಉಜ್ವಲ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.



