ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗಕ್ಕೆ ಚಾಲನೆ

ಶೇರ್ ಮಾಡಿ

 

ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗಕ್ಕೆ ಚಾಲನೆ

ನೆಲ್ಯಾಡಿ: ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸ್ಥಳೀಯವಾಗಿ ಸುಲಭವಾಗಿ ದೊರಕಿಸುವ ಉದ್ದೇಶದಿಂದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಳಿತ್ತೊಟ್ಟು ಶಾಖೆಯಲ್ಲಿ ರಸಗೊಬ್ಬರ ಮಾರಾಟ ವಿಭಾಗವನ್ನು ಬುಧವಾರ ಉದ್ಘಾಟಿಸಲಾಯಿತು.

ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು ನೂತನ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಮಹಾಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಈ ಭಾಗದ ಸದಸ್ಯರ ಬಹುಕಾಲದ ಬೇಡಿಕೆಯಂತೆ ಗೋಳಿತ್ತೊಟ್ಟು ಶಾಖೆಯಲ್ಲಿ ರಾಸಾಯನಿಕ ಗೊಬ್ಬರ ಮಾರಾಟ ವಿಭಾಗವನ್ನು ಆರಂಭಿಸಲಾಗಿದೆ ಎಂದರು. ಇಲ್ಲಿ ರಾಸಾಯನಿಕ ಗೊಬ್ಬರಗಳ ಜೊತೆಗೆ ವಿವಿಧ ಕೀಟನಾಶಕಗಳೂ ಲಭ್ಯವಿದ್ದು, ರೈತರು ಹಾಗೂ ಸದಸ್ಯರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಸದಸ್ಯರು ಸಂಘದ ಮೂಲಕವೇ ಕೃಷಿ ಪರಿಕರಗಳನ್ನು ಖರೀದಿಸಿದರೆ ಸಂಘದ ಅಭಿವೃದ್ಧಿಯ ಜೊತೆಗೆ ರೈತರಿಗೂ ಆರ್ಥಿಕವಾಗಿ ಲಾಭವಾಗಲಿದೆ ಎಂದು ತಿಳಿಸಿದರು.

ಹಿರಿಯ ನಿರ್ದೇಶಕ ಸರ್ವೋತ್ತಮ ಗೌಡ ಮಾತನಾಡಿ, ಮೂರು ಗ್ರಾಮಗಳ ವ್ಯಾಪ್ತಿಯ ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋಳಿತ್ತೊಟ್ಟು ಶಾಖೆಯಲ್ಲಿ ಈ ವಿಭಾಗವನ್ನು ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದು ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ಸುಗಮಗೊಳಿಸಬೇಕು ಎಂದು ಹೇಳಿದರು.

ಮರಣ ಸಾಂತ್ವನ ನಿಧಿ ವಿತರಣೆ:
ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಾಗಿದ್ದ ಇತ್ತೀಚೆಗೆ ನಿಧನರಾದ ಪುರಂದರ ಗೌಡ, ಪುಷ್ಪಾ ಹಾಗೂ ಚಂದ್ರರಾಜ್ ಶೆಟ್ಟಿ ಅವರ ಕುಟುಂಬಗಳಿಗೆ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿಯನ್ನು ವಿತರಿಸಲಾಯಿತು. ಇದೇ ವೇಳೆ ಟಿ.ಎಂ. ಜೋಸೆಫ್ ಅಂಬುಡೇಲು ಅವರು ಸಂಘದಿಂದ ಪ್ರಥಮವಾಗಿ ರಾಸಾಯನಿಕ ಗೊಬ್ಬರ ಖರೀದಿಸಿದ್ದು, ಅವರಿಗೆ ಸಂಘದ ಅಧ್ಯಕ್ಷರು ಗೊಬ್ಬರ ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರಾದ ಜಿನ್ನಪ್ಪ ಗೌಡ, ಸುಧಾಕರ ಬಿ., ಉಷಾ ಅಂಚನ್, ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ್, ಭಾಸ್ಕರ ರೈ, ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್ ಗೋಳಿತ್ತೊಟ್ಟು, ಮಾಜಿ ನಿರ್ದೇಶಕರಾದ ಪ್ರಶಾಂತ ರೈ ಅರಂತಬೈಲು, ಪ್ರಸಾದ್ ಆರ್ಲ, ನೀಲಪ್ಪ ನಾಯ್ಕ್, ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ ಮರಂದೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಮಾಜಿ ಸದಸ್ಯ ಶಿವಪ್ರಸಾದ್ ಶಿವಾರು, ಗ್ರಾಮಸ್ಥರಾದ ಸುಂದರ ಶೆಟ್ಟಿ ಪುರ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ಅಬ್ದುಲ್ಲಾ ಕುಂಞಿ ಕೊಂಕೋಡಿ, ಮನೋಹರ ಜೈನ್ ಆಲಂತಾಯ, ಸದಾನಂದ ಗೌಡ ಡೆಬ್ಬೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ದಯಾಕರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಜನಾರ್ದನ ಗೌಡ ಬರೆಮೇಲು ವಂದಿಸಿದರು.

 

Leave a Reply

error: Content is protected !!