










ನೆಲ್ಯಾಡಿ: ಮರಾಟಿ ಸಮಾಜ ಸೇವಾ ಸಂಘ ನೆಲ್ಯಾಡಿ–ಕೌಕ್ರಾಡಿ ಇದರ ವಾರ್ಷಿಕ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ವಲಯದ ಮರಾಟಿ ಸಮಾಜದ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ನಾಟಕ ರಂಗದಲ್ಲಿ ಸಾಧನೆ ಮಾಡುತ್ತಿರುವ ಉದಯೋನ್ಮುಖ ಕಲಾವಿದ ದಿನೇಶ್ ನಾಯ್ಕ ಪಡುಬೆಟ್ಟು ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಗೀತಾ ನಾಯ್ಕ ನೆಲ್ಲಿತ್ತಡ್ಕ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನಪ್ಪ ನಾಯ್ಕ ಬರೆಗುಡ್ಡೆ ವಹಿಸಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟಕರಾಗಿ ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅಜ್ಜಾವರ ಭಾಗವಹಿಸಿದರು.
ಅತಿಥಿಗಳಾಗಿ ಗೋಪಾಲ ನಾಯ್ಕ ದೊಡ್ಡೇರಿ, ಸೀತಾನಂದ ಬೇರ್ಪಡ್ಕ, ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಪಾಂಗ್ಲಾಯಿ, ಕಾರ್ಯದರ್ಶಿ ರಾಮ ನಾಯ್ಕ ಗೆಣಸಿನ ಕುಮೇರು ಹಾಗೂ ಖಜಾಂಚಿ ಈಶ್ವರ ನಾಯ್ಕ ಕೆ. ಉಪಸ್ಥಿತರಿದ್ದರು.
ಗೋಪಾಲ ನಾಯ್ಕ ದೊಡ್ಡೇರಿ ಅವರು ಸುಳ್ಯ ಮರಾಟಿ ಸಮಾಜ ಸೇವಾ ಸಂಘದಿಂದ ಪ್ರಕಟಿಸಲಾದ ‘ಮರಾಟಿಗರ ಗೋಂದೋಳು ಪೂಜೆ ಹಿನ್ನೆಲೆ ಆಚರಣೆಯ ವಿಧಿ ವಿಧಾನಗಳು ಹಾಗೂ ಇತರ ಪ್ರಮುಖ ಆಚರಣೆಗಳು’ ಎಂಬ ಪುಸ್ತಕವನ್ನು ಪರಿಚಯಿಸಿ, ಮರಾಟಿ ಸಮಾಜದ ಆಚಾರ–ವಿಚಾರಗಳ ಮಹತ್ವವನ್ನು ವಿವರಿಸಿದರು. ಬಳಿಕ ಸೀತಾನಂದ ಬೇರ್ಪಡ್ಕ, ಕರುಣಾಕರ ಪಾಂಗ್ಲಾಯಿ ಹಾಗೂ ರಾಮ ನಾಯ್ಕ ಗೆಣಸಿನ ಕುಮೇರು ಶುಭ ಹಾರೈಸಿದರು.
ಆದ್ಯ ಮತ್ತು ಚೈತನ್ಯ ಕುಮೇರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾಲತಾ ಹಾಗೂ ಪ್ರಜ್ಞಾ ಚಾಮೆತ್ತಮೂಲೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ನಾಯ್ಕ ನಿಸರ್ಗ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶೋಭಾ ಕಲ್ಲಳಿಕೆ ಹಾಗೂ ಪ್ರಜ್ಞಾ ಸನ್ಮಾನ ಪತ್ರ ವಾಚಿಸಿದರು. ಶೀನಪ್ಪ ನಾಯ್ಕ ಬರೆಗುಡ್ಡೆ ವಾರ್ಷಿಕ ವರದಿ ಮಂಡಿಸಿದರೆ, ದಿನೇಶ್ ನಾಯ್ಕ ಪಡುಬೆಟ್ಟು ವಂದಿಸಿದರು.
ಸಹಭೋಜನದ ಬಳಿಕ 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಸಹಕರಿಸಿದರು.



