ಕಡಬ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ವಂಚನೆ ಯತ್ನ; ಇಬ್ಬರ ಬಂಧನ

ಶೇರ್ ಮಾಡಿ

 

ಕಡಬದ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ವಂಚನೆ ಯತ್ನ; ಇಬ್ಬರ ಬಂಧನ

ಕಡಬ: ನಕಲಿ ಚಿನ್ನವನ್ನು ಅಸಲಿ ಚಿನ್ನದಂತೆ ತೋರಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ವಂಚನೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.

ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಬ್ಯಾಂಕ್‌ಗಳ ಸುತ್ತ ಓಡಾಡುತ್ತಿರುವ ಬಗ್ಗೆ ಬಂದ ಗುಪ್ತ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರಂಭದಲ್ಲಿ ತಮ್ಮ ಹೆಸರು, ವಿಳಾಸ ಸೇರಿದಂತೆ ಹಲವು ಮಾಹಿತಿಗಳನ್ನು ತಪ್ಪಾಗಿ ನೀಡಿದ ಆರೋಪಿಗಳು ಬಳಿಕ ತಮ್ಮ ಬಳಿ ಸುಮಾರು 120 ಗ್ರಾಂ ಚಿನ್ನವಿದ್ದು, ಅದನ್ನು ಬ್ಯಾಂಕ್‌ನಲ್ಲಿ ಅಡವಿಡಲು ಬಂದಿರುವುದಾಗಿ ತಿಳಿಸಿದ್ದರು.

ಆದರೆ, ಚಿನ್ನದ ಖರೀದಿ ದಾಖಲೆ ಅಥವಾ ರಶೀದಿ ಕೇಳಿದಾಗ ಯಾವುದೇ ದಾಖಲಾತಿ ಸಲ್ಲಿಸದ ಆರೋಪಿಗಳು ಅಸಮಂಜಸ ಉತ್ತರ ನೀಡಿದ್ದರು. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆಭರಣವು ಅಸಹಜವಾಗಿ ಹೆಚ್ಚಿನ ತೂಕ ಹೊಂದಿದ್ದು, ಬೇರೆ ಲೋಹವನ್ನು ಸೇರಿಸಿ ತೂಕ ಹೆಚ್ಚಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ವಿಚಾರಣೆ ವೇಳೆ ಆರೋಪಿಗಳು ವಿವಿಧ ಬ್ಯಾಂಕ್‌ಗಳಲ್ಲಿ ಈ ಆಭರಣವನ್ನು ಅಡವಿಡಲು ಯತ್ನಿಸಿದ್ದು, ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ. ನಕಲಿ ಚಿನ್ನವನ್ನು ಅಸಲಿ ಚಿನ್ನದಂತೆ ತೋರಿಸಿ ಬ್ಯಾಂಕ್‌ಗೆ ವಂಚನೆ ಎಸಗಿ ಹಣ ಪಡೆಯುವ ಉದ್ದೇಶದಿಂದ ಬಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

 

Leave a Reply

error: Content is protected !!