ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿ ಅನಾಥ ಸ್ಥಿತಿಯಲ್ಲಿ ಅರಸಿನಮಕ್ಕಿ ಬಾಲಕೃಷ್ಣ ಆಚಾರ್ಯ ಮೃತದೇಹ ಪತ್ತೆ

ಶೇರ್ ಮಾಡಿ

 

ಬೆಳ್ತಂಗಡಿ: ಬಸ್ ನಿಲ್ದಾಣದ ಬಳಿ ಅನಾಥ ಸ್ಥಿತಿಯಲ್ಲಿ ಅರಸಿನಮಕ್ಕಿಯ ಬಾಲಕೃಷ್ಣ ಆಚಾರ್ಯ ಮೃತದೇಹ ಪತ್ತೆ

ಕೊಕ್ಕಡ: ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪದ ವೈನ್ ಶಾಪ್ ಬಳಿ ಸೋಮವಾರ ಸಂಜೆ ಅನಾಥ ಸ್ಥಿತಿಯಲ್ಲಿ ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿದ್ದು, ಬಳಿಕ ಅವರ ಗುರುತು ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯ (69) ಎಂದು ದೃಢಪಟ್ಟಿದೆ.

ಸ್ಥಳೀಯರು ವೈನ್ ಶಾಪ್ ಸಮೀಪ ವೃದ್ಧರೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದವರು ಪರಿಶೀಲನೆ ನಡೆಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಮೃತರ ಶರ್ಟ್‌ನ ಕಿಸೆಯಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಆಧರಿಸಿ ಅವರ ಗುರುತನ್ನು ಬಾಲಕೃಷ್ಣ ಆಚಾರ್ಯ ಎಂದು ಪತ್ತೆಹಚ್ಚಲಾಯಿತು.

ಬಳಿಕ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣದ ನಿಖರ ಕಾರಣ ವೈದ್ಯಕೀಯ ಪರೀಕ್ಷೆಯ ಬಳಿಕ ತಿಳಿಯಬೇಕಿದೆ.

ಬಾಲಕೃಷ್ಣ ಆಚಾರ್ಯ ಅವರು ಹಲವು ವರ್ಷಗಳಿಂದ ತಮ್ಮ ಮನೆಯ ಸಮೀಪವೇ ಶೆಡ್ ನಿರ್ಮಿಸಿಕೊಂಡು ಕಬ್ಬಿಣದ ಕಮ್ಮಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ದುಡಿಯುವ ವ್ಯಕ್ತಿಯಾಗಿ ಪರಿಚಿತರಾಗಿದ್ದ ಅವರು, ಇತ್ತೀಚೆಗೆ ಪತ್ನಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತರು ಪುತ್ರ ಪುರುಷೋತ್ತಮ ಹಾಗೂ ಪುತ್ರಿಯರಾದ ಸುಜಾತ ಮತ್ತು ಸುನಂದ ಅವರನ್ನು ಅಗಲಿದ್ದಾರೆ.

 

Leave a Reply

error: Content is protected !!