ಸುಬ್ರಹ್ಮಣ್ಯ: ಪತ್ರಿಕಾ ದಿನಾಚರಣೆ

ಶೇರ್ ಮಾಡಿ

ಸಮಾಜವನ್ನು ಒಗ್ಗೂಡಿಸಿ ದೇಶ ಕಟ್ಟುವ ಕಾಯಕದಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯ- ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ

 

ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈಗೆ ‘ಮಾಧ್ಯಮ ಸಾಧಕ’ ಪುರಸ್ಕಾರ; ಪತ್ರಿಕಾ ವಿತರಕ ಬಸವರಾಜ್‌ಗೆ ‘ಶ್ರೇಷ್ಠ ಪತ್ರಿಕಾ ವಿತರಕ’ ಗೌರವ

 

ಸುಬ್ರಹ್ಮಣ್ಯ: ಪತ್ರಿಕಾ ದಿನಾಚರಣೆ

ಸುಬ್ರಹ್ಮಣ್ಯ: ಪತ್ರಿಕೆಯು ಸಮಾಜವನ್ನು ತಿದ್ದುವ, ಜಾಗೃತಿಗೊಳಿಸುವ ಹಾಗೂ ದೇಶ ಕಟ್ಟುವ ಶಕ್ತಿಯುತ ಮಾಧ್ಯಮವಾಗಿದ್ದು, ಪೆನ್ನಿನ ಮೂಲಕ ಜನರ ಆಶೋತ್ತರಗಳಿಗೆ ಧ್ವನಿಯಾಗುವ ಪತ್ರಕರ್ತರು ಸಮಾಜದಲ್ಲಿ ಜಾಗೃತಿಯ ಬೀಜ ಬಿತ್ತುವ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಹಾಗೂ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿರುವ ಸಂದರ್ಭದಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಪತ್ರಿಕೆಗಳು ಜ್ಞಾನ ವಿಸ್ತರಣೆಗೆ ಪೂರಕವಾಗಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು, ವಿಶ್ಲೇಷಣಾತ್ಮಕ ಲೇಖನಗಳು ಹಾಗೂ ಸಮಕಾಲೀನ ವಿಚಾರಗಳನ್ನು ನಿರಂತರವಾಗಿ ಓದುವುದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಉಜ್ವಲ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತದೆ ಎಂದು ಅವರು ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ ಪತ್ರಿಕೆಯು ಸಮಾಜದ ಜ್ಞಾನ ಸಂಪತ್ತಿನ ಆಗರವಾಗಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಮುಂಜಾನೆ ಎದ್ದು ಪತ್ರಿಕೆ ಓದುವ ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಓದುವ ಹವ್ಯಾಸ ವ್ಯಕ್ತಿಯನ್ನು ಉತ್ತಮ ವಿಚಾರಗಳತ್ತ ಕೊಂಡೊಯ್ಯುವುದರಿಂದ ಯುವಜನತೆ ಹೆಚ್ಚು ಹೆಚ್ಚು ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪತ್ರಿಕಾ ಧರ್ಮ ಚಿರಕಾಲ ಬೆಳೆಯಲಿ ಎಂದು ಹಾರೈಸಿದರು.

ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಮಾತನಾಡಿ, ಶಿಸ್ತು, ಸಮಯಪಾಲನೆ ಹಾಗೂ ಪ್ರಾಮಾಣಿಕತೆ ಪತ್ರಿಕೋದ್ಯಮದ ಜೀವಾಳವಾಗಿದೆ. ಕಠಿಣ ಪರಿಶ್ರಮದಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸಮಾಜದಿಂದ ಅತ್ಯುನ್ನತ ಗೌರವ ದೊರೆಯುತ್ತದೆ. ಪತ್ರಿಕಾ ವಿತರಕರು ಪತ್ರಿಕಾ ಲೋಕದ ಬೆನ್ನೆಲುಬಾಗಿದ್ದು, ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತರ್ಜಾಲ ಮತ್ತು ಡಿಜಿಟಲ್ ಮಾಧ್ಯಮಗಳು ಎಷ್ಟೇ ಅಭಿವೃದ್ಧಿ ಹೊಂದಿದರೂ ಮುದ್ರಣ ಮಾಧ್ಯಮ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಇಂದಿಗೂ ಪ್ರತಿದಿನ ಬೆಳಗ್ಗೆ ಪತ್ರಿಕೆಯನ್ನು ಕಾತರದಿಂದ ಕಾಯುವ ಓದುಗರ ಸಂಖ್ಯೆ ಅಪಾರವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸುಬ್ರಹ್ಮಣ್ಯದ ಪಿ.ಬಿ. ಹರೀಶ್ ರೈ ಅವರಿಗೆ ‘ಮಾಧ್ಯಮ ಸಾಧಕ’ ಪುರಸ್ಕಾರ ಪ್ರ ಮತ್ತು ಹಿರಿಯ ಪತ್ರಿಕಾ ವಿತರಕ ಬಸವರಾಜ್ ಎಸ್. ಟೋಂಗಳೆ ಅವರಿಗೆ ‘ಶ್ರೇಷ್ಠ ಪತ್ರಿಕಾ ವಿತರಕ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಕಾರ್ಯನಿರತ ಪತ್ರಕರ್ತರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೋಲ ವಹಿಸಿದ್ದರು. ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್., ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುಣವರ್ಧನ ಕೆದಿಲ ಮುಖ್ಯ ಅತಿಥಿಗಳಾಗಿದ್ದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿ ಶಿವರಾಮ ಕಜೆಮೂಲೆ ಹಾಗೂ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಚೆನ್ನಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವರಾಮ ಕಜೆಮೂಲೆ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಚೆನ್ನಾವರ ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಸಂವಾದ ಕಾರ್ಯಕ್ರಮ ನಡೆಯಿತು.

 

Leave a Reply

error: Content is protected !!