ಬೆಳ್ತಂಗಡಿ: ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಶೇರ್ ಮಾಡಿ

 

ಬೆಳ್ತಂಗಡಿ: ಸರಣಿ ಕಳ್ಳತನ ಪ್ರಕರಣ; ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಈ ಸಂಬಂಧ ತಮಿಳುನಾಡಿನ ಕೊಯಂಬತ್ತೂರು ಮೂಲದ ಕುಖ್ಯಾತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳ್ಳತನಕ್ಕೆ ಬಳಸುತ್ತಿದ್ದ ಉಪಕರಣಗಳು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಕೊಯಂಬತ್ತೂರು ತಮಿಳುನಾಡು ನಿವಾಸಿ ಜಯಕುಮಾರ್ ವಿ. (55), ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳ ತನಿಖೆ ವೇಳೆ ಆರೋಪಿಯ ಸುಳಿವು ಪತ್ತೆಯಾಗಿದ್ದು, ಜುಲೈ 8ರಂದು ಬಂಧಿಸಲಾಗಿದೆ.

ಬಂಧಿತನ ಬಳಿಯಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಆರೋಪಿಯು ದಕ್ಷಿಣ ಕನ್ನಡ ಜಿಲ್ಲೆಯ ಐದು ಪ್ರಕರಣಗಳಷ್ಟೇ ಅಲ್ಲದೆ, ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆಯ ಒಂದು ಪ್ರಕರಣ, ಕೇರಳ ರಾಜ್ಯದ ನಾಲ್ಕು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಹಾಗೂ ಬೆಂಗಳೂರಿನ ಒಂದು ಪ್ರಕರಣ ಸೇರಿದಂತೆ ಒಟ್ಟು 11 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಎಲ್ಲ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಯಶಸ್ವಿ ಕಾರ್ಯಾಚರಣೆಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ತನಿಖಾ ತಂಡದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಆನಂದ ಎಂ., ಪಿಎಸ್‌ಐ ಸಿಖಂದರ್ ಪಾಷಾ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ., ಬೆಳ್ತಂಗಡಿ ಠಾಣೆಯ ಅಪರಾಧ ದಳದ ಸಿಬ್ಬಂದಿಗಳಾದ ಹೆಚ್‌ಸಿ ಪಂಪಾಪತಿ, ಪಿಸಿ ಗಿರೀಶ್, ಸಿಪಿಸಿ ಹೇಮರಾಜ್, ಉಪ್ಪಿನಂಗಡಿ ಠಾಣೆಯ ಪಿಸಿ ಹರ್ಷಿತ್, ಕಡಬ ಪೊಲೀಸ್ ಠಾಣೆಯ ಹೆಚ್‌ಸಿ ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

 

Leave a Reply

error: Content is protected !!