









ಕೊಕ್ಕಡ: ಅರಸಿನಮಕ್ಕಿ–ಶಿಶಿಲ ರಸ್ತೆಯ ಬರ್ಗುಳ ಸಮೀಪ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಉರುಳಿಬಿದ್ದ ಪರಿಣಾಮ ಬೈಕ್ ಜಖಂಗೊಂಡಿದ್ದು, ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿಶಿಲ ದೇನೋಡಿ ನಿವಾಸಿ ರತೀಶ್ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಮರ ಹಠಾತ್ತನೆ ಬೈಕ್ ಮೇಲೆ ಉರುಳಿಬಿದ್ದಿದೆ. ಘಟನೆಯ ಪರಿಣಾಮ ಬೈಕ್‌ಗೆ ಹಾನಿಯಾಗಿದ್ದು, ರತೀಶ್ ಪೂಜಾರಿ ಅವರು ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಮರ ರಸ್ತೆ ಮಧ್ಯೆ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅರಸಿನಮಕ್ಕಿ–ಶಿಶಿಲ ಘಟಕದ ಸದಸ್ಯರಾದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ, ಕುಶಾಲಪ್ಪ ಗೌಡ ಹಾಗೂ ರಾಧಾಕೃಷ್ಣ ಗುತ್ತು ಅವರ ನೇತೃತ್ವದಲ್ಲಿ ಸ್ಥಳೀಯರಾದ ಮೋಹನ್ ಗೌಡ, ಮಾಧವ ನಾಯ್ಕ್, ಲಕ್ಷ್ಮಣ ಆಚಾರ್, ಕೃಷ್ಣ ನಾಯ್ಕ್ ಸೇರಿದಂತೆ ಹಲವರು ಸ್ಥಳಕ್ಕೆ ಧಾವಿಸಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು.ಇದರಿಂದ ವಾಹನ ಸಂಚಾರ ಮತ್ತೆ ಸುಗಮಗೊಂಡಿತು.
ಘಟನಾ ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೆಸ್ಕಾಂ ಪವರ್‌ಮ್ಯಾನ್ ಸಂತೋಷ್ ಅವರು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬಗಳಿಗೆ ಯಾವುದೇ ಹಾನಿಯಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಸಿದರು.



