









ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 38 ವರ್ಷಗಳ ಕಾಲ ಗುಮಾಸ್ತರಾಗಿ ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಜು.31ರಂದು ನಿವೃತ್ತರಾದ ರತ್ನಾಕರ ಬಂಟ್ರಿಯಾಲ್ ಅವರಿಗೆ ಸಂಘದ ಕೇಂದ್ರ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಸಭಾಂಗಣದಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಅವರು ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಸಂಘದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಷ್ಟದಲ್ಲಿದ್ದ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಅವರ ಸೇವೆ ಮಹತ್ವದ್ದಾಗಿದ್ದು, ನಿವೃತ್ತಿಯ ನಂತರವೂ ಅವರ ಮಾರ್ಗದರ್ಶನ ಸಂಘಕ್ಕೆ ಅಗತ್ಯವಿದೆ ಎಂದು ಹೇಳಿದರು.
ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಮಾತನಾಡಿ ರತ್ನಾಕರ ಬಂಟ್ರಿಯಾಲ್ ಅವರದ್ದು ಸದಾ ನಗುಮುಖದ, ನಿಷ್ಠೆಯ ಸೇವೆಯಾಗಿತ್ತು. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿಯೂ ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ಅವರ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾಕರ ಬಂಟ್ರಿಯಾಲ್, 1981ರಲ್ಲಿ ಸಂಘದ ಸೇವೆಗೆ ಸೇರಿದ್ದು, 38 ವರ್ಷಗಳ ಸೇವಾ ಅವಧಿಯಲ್ಲಿ ನಾಲ್ವರು ಕಾರ್ಯದರ್ಶಿಗಳು ಹಾಗೂ ಏಳು ಮಂದಿ ಅಧ್ಯಕ್ಷರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿದೆ. ಸಂಕಷ್ಟದಲ್ಲಿದ್ದ ಸಂಘ ಇಂದು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವುದು ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ. ಸಂಘದ ವ್ಯಾಪ್ತಿಯ ಏಳು ಗ್ರಾಮಗಳ ಸದಸ್ಯರಿಗೆ ಆತ್ಮೀಯತೆಯಿಂದ ಸೇವೆ ಸಲ್ಲಿಸಿರುವ ತೃಪ್ತಿ ಇದ್ದು, ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸರ್ವೋತ್ತಮ ಗೌಡ, ಉಷಾ ಅಂಚನ್, ಸಂಘದ ನಿವೃತ್ತ ವ್ಯವಸ್ಥಾಪಕ ಸೆಬಾಸ್ಟಿಯನ್ ಪಿ.ಜೆ., ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಶಾಖಾ ವ್ಯವಸ್ಥಾಪಕ ರಮೇಶ್ ನಾಯ್ಕ್, ಕುಟುಂಬದ ಪರವಾಗಿ ವಿನ್ಯಾಸ್ ಬಂಟ್ರಿಯಾಲ್, ತುಕಾರಾಮ ರೈ ಹೊಸಮನೆ ಹಾಗೂ ಸೊಸೆ ಸುರಕ್ಷಿತ ವಿಜೇಶ್ ಅವರು ರತ್ನಾಕರ ಬಂಟ್ರಿಯಾಲ್ ಅವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಸಮಯಪಾಲನೆ, ಮಾನವೀಯ ಗುಣಗಳು ಹಾಗೂ ಸಂಘದ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ದಯಾಕರ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರತ್ನಾಕರ ಬಂಟ್ರಿಯಾಲ್ ಅವರು ಪರಿಶ್ರಮ, ಶಿಸ್ತು ಹಾಗೂ ಕರ್ತವ್ಯಪ್ರಜ್ಞೆಯಿಂದ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಸದಸ್ಯರ ಹಾಗೂ ಸಹೋದ್ಯೋಗಿಗಳ ವಿಶ್ವಾಸ ಗಳಿಸಿದ್ದ ಅಪರೂಪದ ಅಧಿಕಾರಿ ಎಂದು ಶ್ಲಾಘಿಸಿದರು.
ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ, ಭಾಸ್ಕರ ರೈ ತೋಟ, ಬಾಬು ನಾಯ್ಕ್ ಅಲಂಗಪೆ, ಹರೀಶ್ ಎ., ಸುಧಾಕರ ಬಿ. ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಮಾಜಿ ನಿರ್ದೇಶಕರಾದ ಪ್ರಸಾದ್ ಅಬ್ರಹಾಂ ಆರ್ಲ, ಸುದರ್ಶನ ಶಿರಾಡಿ, ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್. ಎಡಪಡಿತ್ತಾಯ, ನಿವೃತ್ತ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಆರ್., ಪ್ರಮುಖರಾದ ನೋಣಯ್ಯ ಗೌಡ ಅನಿಲ, ಸುಂದರ ಗೌಡ ಅತ್ರಿಜಾಲು, ರಮೇಶ್ ಶೆಟ್ಟಿ ಬೀದಿ, ಗಿರೀಶ್ ಶೆಟ್ಟಿ ಬೀದಿ, ಮಹಾಬಲ ಶೆಟ್ಟಿ ದೋಂತಿಲ, ಬಾಲಕೃಷ್ಣ ತೋಟ, ಸದಾನಂದ ಕುಂಡಡ್ಕ, ಸಂಘದ ಸಿಬ್ಬಂದಿ, ಸದಸ್ಯರು ಹಾಗೂ ರತ್ನಾಕರ ಬಂಟ್ರಿಯಾಲ್ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತರಾದ ರತ್ನಾಕರ ಬಂಟ್ರಿಯಾಲ್ ಹಾಗೂ ಅವರ ಪತ್ನಿ ವನಜಾಕ್ಷಿ ಅವರನ್ನು ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಸಂಘದ ಸಿಬ್ಬಂದಿ ಮುಕುಂದ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸಿಬ್ಬಂದಿ ಸಂದೀಪ್ ವಂದಿಸಿದರು. ವ್ಯವಸ್ಥಾಪಕ ಮಹೇಶ್ ಎಂ.ಟಿ. ಕಾರ್ಯಕ್ರಮ ನಿರೂಪಿಸಿದರು.



