ಶಿಶಿಲ: ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನದ ಹೊರಾಂಗಣ ಜಲಾವೃತ

ಶೇರ್ ಮಾಡಿ

 

ಶಿಶಿಲ: ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನದ ಹೊರಾಂಗಣ ಜಲಾವೃತ

ಕೊಕ್ಕಡ: ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನದಿಗಳು, ಹಳ್ಳಗಳು ಹಾಗೂ ತೊರೆಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿಶಿಲ ಗ್ರಾಮದ ಪವಿತ್ರ ಮತ್ಸ್ಯತೀರ್ಥ ಶ್ರೀ ಶಿಶಿಲೇಶ್ವರ ದೇವಸ್ಥಾನದ ಕಪಿಲ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ದೇವಸ್ಥಾನದ ಹೊರಾಂಗಣ ಸಂಪೂರ್ಣ ಜಲಾವೃತಗೊಂಡಿದೆ.

ನದಿಯ ಪ್ರವಾಹದ ನೀರು ದೇವಸ್ಥಾನದ ಹೊರಭಾಗದವರೆಗೆ ಆವರಿಸಿದೆ. ಮಳೆ ಮುಂದುವರಿದರೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿದ್ದಾರೆ.

ಇದೇ ವೇಳೆ, ಬೆಳಗ್ಗಿನಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಿಶಿಲ ವ್ಯಾಪ್ತಿಯ ಹಲವೆಡೆ ಮಳೆನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಗಳಲ್ಲೇ ನಿಂತಿದೆ. ಪರಿಣಾಮ ಪ್ರಮುಖ ರಸ್ತೆಗಳು ಸರೋವರದಂತಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆ, ಅಂಗಡಿ ಮುಂಭಾಗ ಹಾಗೂ ತಗ್ಗು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುವ ದೃಶ್ಯಗಳು ಕಂಡುಬಂದಿದ್ದು, ಸಾರ್ವಜನಿಕರ ಓಡಾಟಕ್ಕೂ ಅಡಚಣೆ ಉಂಟಾಗಿದೆ.

ಹವಾಮಾನ ಇಲಾಖೆ ಮುಂದಿನ ಕೆಲ ಗಂಟೆಗಳವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯನ್ನು ಸೂಚಿಸಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸ್ಥಳೀಯ ಆಡಳಿತ ಮನವಿ ಮಾಡಿದೆ.

 

Leave a Reply

error: Content is protected !!