ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ಆರೋಗ್ಯ ಭಾಗ್ಯ ಕಾಪಾಡಲು ಯೋಗ ಪ್ರೇರಕ ಶಕ್ತಿ: ಡಾ| ಡಿ.ವೀರೇಂದ್ರ ಹೆಗ್ಗಡೆ

ಶೇರ್ ಮಾಡಿ

ನೇಸರ ಮಾ.30: ಮನಸ್ಸು ಅನೇಕ ಸುಖಗಳನ್ನು ಬಯಸುವ ಸ್ವಾತಂತ್ರ್ಯವನ್ನು ಹೊಂದಿರುವುದರಿಂದ ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ಆರೋಗ್ಯ ಭಾಗ್ಯ ಕಾಪಾಡಲು ಯೋಗ ಪ್ರೇರಕ ಶಕ್ತಿಯಾಗಿದೆ. ಯೋಗದಿಂದ ಅಡ್ಡಪರಿಣಾಮವಿಲ್ಲದೆ ರೋಗ ಮುಕ್ತ ಜೀವನ ಸಂಪಾದಿಸಬಹುದು ಎಂಬುದನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಭಾರತದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವ್ಯಾಖ್ಯಾನಿಸಿದರು.
ಭಾರತ ಸರಕಾರದ ಆಯುಷ್‌ ಮಂತ್ರಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಉಜಿರೆಯ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ (ಸಿಎನ್‌ವೈಎಸ್‌) ವತಿಯಿಂದ ಧರ್ಮಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡ ಯೋಗ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳಿಂದ ಭಾರತದ ಋಷಿ, ಮುನಿಗಳು ಪ್ರಕೃತಿಯ ಪ್ರಶಾಂತ ಮಡಿಲಲ್ಲಿ ಯೋಗಾಭ್ಯಾಸ, ಧ್ಯಾನ, ಪ್ರಾರ್ಥನೆ ಮಾಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ಈಗ ಯೋಗಕ್ಕೆ ಪರ್ಯಾಯವಾಗಿ ವಾಕಿಂಗ್‌, ಜಾಗಿಂಗ್‌, ಈಜು ಮೊದಲಾದವುಗಳನ್ನು ಬಳಸಿದರೂ ಯಾವುದೇ ಅಡ್ಡಪರಿಣಾಮ ಭೀರದ ಅತ್ಯಂತ ಪರಿಣಾಮಕಾರಿ ವಿಧಾನ ಯೋಗವೊಂದೇ ಆಗಿದೆ ಎಂದು ಅಭಿಪ್ರಾಯಪಟ್ಟರು. ಬ್ಯಾಂಕ್‌ ಆಫ್‌ ಬರೋಡಾದ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ ಆರ್‌. ಶುಭಾಶಂಸನೆಗೈದು, ನಿತ್ಯಯೋಗಾಭ್ಯಾಸದಿಂದ ಸುಖ, ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು ಎಂದರು. ಬ್ಯಾಂಕ್‌ ಆಫ್‌ ಬರೋಡಾದ ಮಂಗಳೂರು ವಲಯದ ಮುಖ್ಯಸ್ಥ ಆರ್‌. ಗೋಪಾಲಕೃಷ್ಣ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಧರ್ಮಸ್ಥಳದ ಸೇವೆ ಶ್ಲಾಘನೀಯ ಎಂದರು.
ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತರಾಮ ತೋಳ್ಪಡಿತ್ತಾಯ, ಯೋಗ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್‌ ಉಪಸ್ಥಿತರಿದ್ದರು.
ಉಜಿರೆಯ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ (ಸಿಎನ್‌ವೈಎಸ್‌) ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಸ್ವಾಗತಿಸಿ, ಯೋಗ ವಿಭಾಗದ ಡೀನ್‌ ಡಾ| ಶಿವಪ್ರಸಾದ ಶೆಟ್ಟಿ ವಂದಿಸಿದರು. ಪ್ರೊ| ಜೋಸ್ನಾ ಕಾರ್ಯಕ್ರಮ ನಿರ್ವಹಿಸಿದರು.
ಆರೋಗ್ಯ ಸಂಬಂಧಿಸಿದ ಸ್ವಯಂಪರೀಕ್ಷೆ ಕೈಗೊಳ್ಳಬಹುದಾದ ವೈದ್ಯಕೀಯ ಕಿಟ್‌ ಅನ್ನು ಐವರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. 500ಕ್ಕೂ ಅಧಿಕ ಮಂದಿ ಸಾಧಕರಿಂದ ಯೋಗ ಪ್ರದರ್ಶನ ನಡೆಯಿತು.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!