ನಮ್ಮಲ್ಲಿ ವಾಹನಗಳು ಇರುವುದು ನಮ್ಮ ಸುಖಕರ ಪ್ರಯಾಣಕ್ಕೆ ಹೊರತು ನಮ್ಮ ಅಂತಸ್ತು , ಗೌರವ, ಅಹಂಗಳನ್ನು ತೋರ್ಪಡಿಸುವುದಕ್ಕಲ್ಲ – ಲೇಖನ : ವಿಪಂಚಿ
ನೇಸರ ಮಾ.31: ಮಾಧ್ಯಮಗಳಲ್ಲಿ ಪ್ರಸ್ತುತ ಅಪಘಾತಗಳ ಸುದ್ದಿಗಳೇ ಸದ್ದು ಮಾಡುತ್ತಿದೆ. ಜನರ ಮಧ್ಯೆ ಅಪಘಾತಗಳದ್ದೆ ಚರ್ಚೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ, ನಗರದ ರಸ್ತೆಗಳಲ್ಲಿ, ಅಲ್ಲಿ ಇಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಸಾವು-ನೋವುಗಳು ಸಂಭವಿಸುತ್ತಲೇ ಇವೆ. ದ್ವಿಚಕ್ರವಾಹನಗಳು ಲಘು ವಾಹನಗಳು, ಘನ ವಾಹನಗಳು, ಆಟೋರಿಕ್ಷಾಗಳು, ರಸ್ತೆಯಲ್ಲಿ ಚಲಿಸುವ ಟ್ರ್ಯಾಕ್ಟರ್, ಜೆಸಿಬಿ, ಇನ್ನಿತರ ವಾಹನಗಳು ಅಪಘಾತಕ್ಕೊಳಗಾಗಿ ಸಾವು-ನೋವುಗಳು ಸಂಭವಿಸುತ್ತಿವೆ.
ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಒಂದಷ್ಟು ಜಾಗೃತಿ ಮೂಡಿಸುವ ಪ್ರಯತ್ನವೇ ಈ ಲೇಖನ.
ನಮ್ಮಲ್ಲಿ ವಾಹನಗಳು ಇರುವುದು ನಮ್ಮ ಸುಖಕರ ಪ್ರಯಾಣಕ್ಕೆ ಹೊರತು ನಮ್ಮ ಅಂತಸ್ತು ಗೌರವ ಅಹಂ ಗಳನ್ನು ತೋರ್ಪಡಿಸುವುದಕ್ಕಲ್ಲ ಎಂಬುದನ್ನು ನಾವು ಮೊದಲು ತಿಳಿದುಕೊಂಡು ವಾಹನಗಳನ್ನು ಚಲಾಯಿಸಬೇಕು. ದ್ವಿಚಕ್ರವಾಹನವನ್ನು ಚಲಾಯಿಸುವವರು ದಯವಿಟ್ಟು ಬಿಗುಮಾನ ಬಿಟ್ಟು ಬಿಡಿ. ಕೆಲವೊಂದು ಸಲ ಕಾರು ಅಥವಾ ಇನ್ನಿತರ ಲಘು ವಾಹನಗಳು ಓವರ್ ಟೆಕ್ ಮಾಡುತ್ತಾ ಎದುರು ನಿಂದ ಬಂದಾಗ.. ನಮ್ಮ ದ್ವಿಚಕ್ರವಾಹನಕ್ಕೆ ಬೇಕಾದಷ್ಟು ಸ್ಥಳಾವಕಾಶ ಇರುವಾಗ ನಾವು ಬದಿಗೆ ಸರಿಯುವುದು ಅತಿ ಉತ್ತಮ. ಕೆಲವೊಂದು ಸಲ ಕೆಲವು ದ್ವಿಚಕ್ರ ವಾಹನ ಸವಾರರು ಎದುರಿನಿಂದ ವಾಹನಗಳು ಬಂದಾಗ ಬದಿಯಲ್ಲಿ ಸ್ಥಳಾವಕಾಶ ಇದ್ದರೂ ರಸ್ತೆಯ ಬಲಭಾಗಕ್ಕೆ ಬಂದು ಅಡ್ಡ ನಿಲ್ಲಿಸುವುದು…. ಕೈಯಲ್ಲಿ ಸನ್ನೆ ಮಾಡುವುದು….. ಮುಂತಾದ ವರ್ತನೆಗಳನ್ನು ಕಾಣುತ್ತೇವೆ. ಇದು ತುಂಬಾ ಅಪಾಯಕಾರಿ. ದ್ವಿಚಕ್ರ ವಾಹನಗಳಲ್ಲಿ ನಾವು ಅತ್ಯಂತ ಜಾಗರೂಕತೆಯಿಂದ ಪ್ರಯಾಣಿಸಬೇಕು.
ಪ್ರತಿಯೊಬ್ಬ ಚಾಲಕನು ಅಪಘಾತವನ್ನು ತಪ್ಪಿಸುವ ಪ್ರಯತ್ನವನ್ನು ಮಾಡಬೇಕು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಹೊಂದಾಣಿಕೆ. ಅಕಸ್ಮಾತ್ ಒಬ್ಬ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದರೆ, ನಾವು ಆದಷ್ಟು ಬದಿಗೆ ಸರಿದು ಅವನಿಗೆ ಹೋಗಲು ಅವಕಾಶ ಮಾಡಿಕೊಟ್ಟರೆ ಅಪಘಾತವನ್ನು ತಪ್ಪಿಸಬಹುದು. ಏನೋ ಆತನಿಗೆ ತುರ್ತುಪರಿಸ್ಥಿತಿ ಇರಬಹುದು ಎಂದು ನಾವು ತಿಳಿಯಬೇಕು, ಇಂತಹ ಸಂದರ್ಭದಲ್ಲಿ ನಾವು ಕೂಡ ತಾಳ್ಮೆ ಕಳೆದುಕೊಂಡು ಆತನ ಎದುರು ನಿಂತರೆ ಅಪಘಾತವಾಗುವುದು ಖಂಡಿತ.
ಯಾವುದೇ ಕಾರಣಕ್ಕೂ ಚಾಲನೆಯಲ್ಲಿ ಅವಸರ ಬೇಡ. ನಮ್ಮ ಹೆದ್ದಾರಿಯಲ್ಲಿ ಘನವಾಹನಗಳು ಅತ್ಯಂತ ಹೆಚ್ಚು ವೇಗದಲ್ಲಿ ಚಲಿಸುವುದನ್ನು ನಾವು ಕಾಣುತ್ತೇವೆ. ಈಗಿನ ಹೈ ಸ್ಪೀಡ್ ಎಂಜಿನ್ ಗಳನ್ನು ಹೊಂದಿರುವ ಲಾರಿಗಳು, ಅದರಲ್ಲಿ ಎಷ್ಟು ಚಕ್ರಗಳಿವೆ ಎಂದು ಅದರ ಚಾಲಕನಲ್ಲಿ ಕೇಳಿದರೆ ಬಹುಷಃ ಅವನಿಗೆ ಗೊತ್ತಿರಲಾರದು..!, ಕೆಲವು ಲಾರಿಗಳಲ್ಲಿ ಚಕ್ರಗಳನ್ನು ಲುಂಗಿ ಎತ್ತಿ ಕಟ್ಟಿದಂತೆ ಎತ್ತಿ ಕಟ್ಟಿರುವುದು ಕಾಣುತ್ತದೆ..! ಇಂತಹ ಲಾರಿಗಳ ವೇಗದ ಭರಾಟೆಯಲ್ಲಿ ಕಾರು ಚಾಲಕರು ಸಹನೆ ಕಳೆದುಕೊಳ್ಳುವುದು ಸಹಜ. ಆದರೂ “Better Late than Never” ಅಂದ ಹಾಗೆ ತಲುಪುವಾಗ ಸ್ವಲ್ಪ ತಡವಾದರೂ ಪರವಾಗಿಲ್ಲ… ಬದುಕಿ ಉಳಿಯಬೇಕು ಎನ್ನುವ ಮನೋಭಾವನೆ ಇದ್ದರೆ ಒಳಿತು. ನಮ್ಮ ನೆಲ್ಯಾಡಿ, ಧರ್ಮಸ್ಥಳ ರಸ್ತೆಯಲ್ಲಿ ಓಡಾಡುವ ಯಾತ್ರಿಕರ ವಾಹನಗಳಿಗೆ ಲಂಗು ಲಗಾಮ್ ಇಲ್ಲದಂತಾಗಿದೆ. ಕೆಲವು ಚಾಲಕರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಅರಿವು ಇಲ್ಲದಂತಾಗಿದೆ. ಎದುರಿನಿಂದ ಬರುವ ವಾಹನಗಳ ಮೇಲೆಯೇ ಏರಿ ಬಂದಂತೆ ಭಾಸವಾಗುತ್ತದೆ ಇವರ ಚಾಲನೆ. ಅದರ ಜೊತೆಗೆ ಕರ್ಕಶ ಹಾರ್ನ್ ಬೇರೆ ಭೂಷಣ ಇವರ ಚಾಲನೆಗೆ. ಆದಿತ್ಯವಾರ ದಿವಸದಂದು ಧರ್ಮಸ್ಥಳ ಮತ್ತು ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಪ್ರಯಾಣ ಮಾಡುವುದು ಭಯಾನಕ ಅನುಭವ. ಈಗೀಗ ಹೆಡ್ ಲೈಟ್ ಫ್ಲಾಶ್ ಮಾಡುವುದು ಒಂದು ಫ್ಯಾಷನ್ ಆಗಿದೆ. ಅಗತ್ಯವಿಲ್ಲದಿದ್ದರೂ ಹೆಡ್ ಲೈಟ್ ಫ್ಲಾಶ್ ಮಾಡುವುದು, ಅನಗತ್ಯ ಹಾರ್ನ್ ಮಾಡುವುದು ಒಂದು ವಾಹನವನ್ನು ಓವರ್ ಟೆಕ್ ಮಾಡಿ ಅದರ ಮುಂದೆ ಹೋಗಿ ಮತ್ತೆ ನಿಧಾನಗತಿಯಲ್ಲಿ ಹೋಗುವುದು ಇದೆಲ್ಲಾ ಈಗಿನ ಕೆಲವು ಚಾಲಕರ ಮನೋಸ್ಥಿತಿ.
ಈಗಿನ ಕೆಲವು ಯುವ ಚಾಲಕರಲ್ಲಿ ರಸ್ತೆ ಸಂಚಾರ ನಿಯಮಗಳ ಅರಿವಿನ ಕೊರತೆ ಎದ್ದು ಕಾಣುತ್ತದೆ. ವಾಹನಗಳಲ್ಲಿ ಇಂಡಿಕೇಟರ್ ಇರುವುದು ವಾಹನ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದನ್ನು ಸೂಚಿಸಲು…. ಆದರೆ ಈಗೀಗ ಹಿಂದಿನ ವಾಹನದವರಿಗೆ ಮುಂದೆ ಹೋಗಲು ಬಲಭಾಗದ ಇಂಡಿಕೇಟರ್ ಬಳಸುವುದನ್ನು ನಾವು ಕಾಣುತ್ತೇವೆ. ಈ ನಿಯಮವನ್ನು ಯಾರು ಬಳಕೆಗೆ ತಂದರೋ ಯಮನೇ ಬಲ್ಲ. ಇದು ಅತ್ಯಂತ ಅಪಾಯಕಾರಿ…, ಇತ್ತೀಚೆಗೆ ಟಿಪ್ಪರ್ ಲಾರಿಯ ಚಾಲಕನೊಬ್ಬ ಬಲ ಬದಿಯ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸಿದಾಗ ಅದರ ಹಿಂದೆ ಇದ್ದ ಬೈಕ್ ಸವಾರನೊಬ್ಬ.. ಮುಂದೆ ಹೋಗಲು ಸೂಚನೆ ಎಂದು ತಪ್ಪಾಗಿ ಅರ್ಥೈಸಿ ಮುಂದಕ್ಕೆ ಚಲಿಸಿದಾಗ… ಟಿಪ್ಪರ್ ಬಲಕ್ಕೆ ತಿರುಗಿ ಬೈಕ್ ಸವಾರನ ಮೇಲೆ ಹರಿದು ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ. ಯಾರೋ ಕೆಲವು ಮೂರ್ಖರು ತಾವೇ ಮಾಡಿಕೊಂಡ ಕೆಲವು ನಿಯಮಗಳಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಪ್ರಸ್ತುತ ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಎದುರಿನಿಂದ ವಾಹನಗಳು ಬರುವಾಗ ನಮ್ಮ ವಾಹನದ ಹೆಡ್ ಲೈಟಿನ ಹೈ ಬೀ ಮನ್ನು ಲೋ ಬೀಮ್ ಮಾಡಬೇಕು ಅದೇ ರೀತಿ ಎದುರಿನಿಂದ ಬರುವವನು ಹೆಡ್ ಲೈಟನ್ನು ಲೋ ಬೀಮ್ ಮಾಡಬೇಕು… ಇದು ನಿಯಮ. ಹೆಡ್ ಲೈಟನ್ನು ಡಿಮ್ ಮಾಡುವುದರಿಂದ ಎದುರಿನಿಂದ ಬರುವ ವಾಹನಗಳ ಚಾಲಕರ ಕಣ್ಣಿಗೆ ಮುಂದಿನ ರಸ್ತೆ ಸ್ಪಷ್ಟವಾಗಿ ಗೋಚರಿಸುವುದು. ಅದೇ ರೀತಿ ಎದುರಿನಿಂದ ಬರುವವರು ಡಿಮ್ ಮಾಡಿದಾಗ ನಮಗೂ ನಮ್ಮ ಮುಂದಿನ ರಸ್ತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಪ್ರಸ್ತುತ ಚಾಲಕರು ಈ ರೀತಿಯ ನಿಯಮಗಳನ್ನು ಪಾಲಿಸುತ್ತಾರೆಯೇ? ಕೆಲವರಿಗಂತೂ ಅವರ ವಾಹನದಲ್ಲಿ ಇಂಥದ್ದೊಂದು ವ್ಯವಸ್ಥೆ ಇದೆ ಎಂಬುದು ಗೊತ್ತೇ ಇಲ್ಲ. ಮೊದಲು ನಾವು ನಮ್ಮ ವಾಹನಗಳ ಹೆಡ್ ಲೈಟ್ ಅನ್ನು ಡಿಮ್ ಮಾಡೋಣ.. ಆದರೂ ಮುಂದಿನ ವಾಹನದ ಚಾಲಕ ಪ್ರತಿಕ್ರಯಿಸುವುದಿಲ್ಲ ಎಂದಾದರೆ ಅವನು ಸಂಚಾರ ನಿಯಮಗಳ ಅನಕ್ಷರಸ್ಥ ಎಂದೇ ತಿಳಿಯಬಹುದು. ಘನ ವಾಹನಗಳ ಚಾಲಕರು ದ್ವಿಚಕ್ರ ವಾಹನಗಳನ್ನು ಕಡೆಗಣಿಸುವುದು ಕೂಡ ಅಪಘಾತಕ್ಕೆ ಮುಖ್ಯ ಕಾರಣವಾಗುವುದು.
ಅಪಘಾತಕ್ಕೆ ಕಾರಣವಾಗಬಲ್ಲ ಪ್ರಮುಖ ಅಂಶಗಳು.
- ಅವಸರ, ಅಹಂ,
- ತಾಳ್ಮೆ, ಸಹನೆ ಗಳ ಕೊರತೆ
- ಕಾನೂನಿನ ಅರಿವು ಇಲ್ಲದಿರುವುದು
- ಅನಗತ್ಯ ಅತಿವೇಗ
- ಹೊಂದಾಣಿಕೆಯ ಕೊರತೆ
- ರಾತ್ರಿ ಹೊತ್ತು ಹೆಡ್ಲೈಟ್ ಲೋ ಬೀಮ್ ಮಾಡದಿರುವುದು
- ಅನಗತ್ಯ ಹಾರ್ನ್ ಹೊಡೆಯುವುದು
- ಏಕಮುಖ ಸಂಚಾರದಲ್ಲಿ ವಿರುದ್ಧ ದಿಕ್ಕಿನಿಂದ ಚಲಿಸುವುದು
- ಸರಿಯಾದ ಸೂಚನೆ(ಇಂಡಿಕೇಟರ್) ನೀಡದೆ ತಿರುಗಿಸುವುದು
- ಸಂಚಾರಿ ನಿಯಮಗಳ ಅರಿವು ಇಲ್ಲದಿರುವುದು
- ರಸ್ತೆಯಲ್ಲಿ ವಾಹನಗಳ ಮಧ್ಯೆ ಅಂತರ ಕಾಯ್ದುಕೊಳ್ಳದಿರುವುದು
- ಅಮಲು ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸುವುದು……
ಅಪಘಾತ ರಹಿತ ಚಾಲನೆಗೆ ಹನ್ನೊಂದು ಸೂತ್ರಗಳು
- ವಾಹನದ ಇಂಜಿನ್ ಚಾಲನೆ ಮಾಡಿದ ಕೂಡಲೇ ಒಮ್ಮೆಲೆ ಚಲಿಸಬೇಡಿ, ಸುಮಾರು ಹತ್ತು ಸೆಕೆಂಡುಗಳ ಕಾಲ ನಿಧಾನಿಸಿ ಮತ್ತೆ ಹೊರಡಿ. ಯಾಕೆಂದರೆ ನಿಮ್ಮ ವಾಹನದ ಅಡಿಯಲ್ಲಿ ಕೆಲವು ಪ್ರಾಣಿಗಳು ನೆರಳಿನ ಆಸರೆ ಬಯಸಿ ಮಲಗಿರಬಹುದು, ಅವುಗಳಿಗೆ ಹೊರಗೆ ಹೋಗಲು ಅವಕಾಶ ನೀಡಿ.
- ಚಾಲನೆ ಮಾಡುವಾಗ ನಿಮ್ಮ ಮನಸ್ಸು ಆಹ್ಲಾದಕರವಾಗಿರಲಿ. ಮುಖದಲ್ಲಿ ಸ್ವಲ್ಪ ನಗುವಿರಲಿ. ಕಿರಿದಾದ ರಸ್ತೆಗಳಲ್ಲಿ ಚಲಿಸುವಾಗ ಮೊದಲು ನೀವು ಬದಿಗೆ ಸರಿಯಿರಿ, ಆಗ ಎದುರಿನಿಂದ ಬರುವವರು ನಿಮ್ಮ ಸೌಜನ್ಯತೆಗೆ ಸೋತು ತಾವು ಬದಿಗೆ ಸರಿಯುವುದರಿಂದ ಆರಾಮದಾಯಕವಾಗಿ ಚಲಿಸಲು ಅವಕಾಶವಾಗುತ್ತದೆ
- ರಾತ್ರಿಯ ಚಾಲನೆಯಲ್ಲಿ ಎದುರಿನಿಂದ ವಾಹನಗಳು ಬರುವಾಗ ಮೊದಲು ನೀವೇ ಹೆಡ್ಲೈಟ್ ಲೋ ಬೀಮ್ ಬಳಸಿ. ಆವಾಗ ಎದುರಿನವರು ಹೆಡ್ಲೈಟ್ ಡಿಮ್ ಮಾಡುತ್ತಾರೆ.
- ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿ
- ದ್ವಿಚಕ್ರವಾಹನ ಸವಾರರ ಬಗ್ಗೆ ಕಾಳಜಿ ಅನುಕಂಪವಿರಲಿ.
- ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ.
- ಪಾದಚಾರಿಗಳು ರಸ್ತೆ ದಾಟುವಾಗ ವಾಹನವನ್ನು ನಿಲ್ಲಿಸಿ ಅವರಿಗೆ ರಸ್ತೆದಾಟಲು ಅವಕಾಶ ಮಾಡಿಕೊಡಿ, ಅವರಿಗೂ ದಾರಿಯ ಹಕ್ಕು ಇದೆ.
- ತಿರುವುಗಳಲ್ಲಿ ಮುಂದಿನ ರಸ್ತೆ ಕಾಣದಿರುವಾಗ ಓವರ್ ಟೆಕ್ ಮಾಡದಿರಿ.
- ನಿಮ್ಮ ವಾಹನದ ವೇಗ ನಿಮ್ಮ ನಿಯಂತ್ರಣದಲ್ಲಿರಲಿ.
- ನಿಮ್ಮ ವಾಹನದ ತಪಾಸಣೆ ಸರಿಯಾದ ಸಮಯದಲ್ಲಿ ಮಾಡಿಸಿಕೊಳ್ಳಿ.
- ವಾಹನ ಚಾಲನೆ ಮಾಡುವಾಗ ಸಹನೆ ತಾಳ್ಮೆ, ಏಕಾಗ್ರತೆ ಇರಲಿ.
ವಾಹನವನ್ನೇರುವಾಗ ನಮಗೋಸ್ಕರ ನಮ್ಮ ಪ್ರೀತಿ ಪಾತ್ರರು ಕಾಯುತ್ತಿರುವರು ಎಂಬುದು ನಮ್ಮ ಮನಸ್ಸಿನಲ್ಲಿರಲಿ. ವಾಹನಗಳು ನಮ್ಮನ್ನು ಸುರಕ್ಷಿತವಾಗಿ ನಮ್ಮ ನಮ್ಮ ಗುರಿಯೆಡೆಗೆ ಮುಟ್ಟಿಸಬೇಕಾದರೆ ಅದನ್ನು ನಿಯಂತ್ರಿಸುವ ಕೈಗಳು ಎಚ್ಚರದಿಂದಿರಬೇಕು. ಸರ್ವರಿಗೂ ವಾಹನದ ಪ್ರಯಾಣ ಸುಖಕರವಾಗಿರಲಿ.