ಮರಳಿ ಬಂದಿದೆ ಯುಗಾದಿ, ಈ ಹಬ್ಬದ ಮಹತ್ವವೇನು..? ಆಚರಣೆ ಹೇಗೆ..?

ಶೇರ್ ಮಾಡಿ

ಶುಭಕೃತ್ ಸಂವತ್ಸರವು ಎಲ್ಲರ ಪಾಲಿಗೂ ಮಂಗಳ ಮಯವಾಗಲಿ, ಶುಭವಾಗಲಿ.

ನೇಸರ ಎ.02: ಯುಗಾದಿಯು ಪ್ರಕೃತಿಯ ಪುನರುಜ್ಜೀವನಕ್ಕೆ ಹೇಗೆ ಕಾರಣವಾಗುತ್ತದೆಯೋ ಅದೇ ರೀತಿ ಮನುಷ್ಯನ ಜೀವನದ ಮೇಲೂ ನೂತನವಾದ ಪರಿಣಾಮ ಬೀರುತ್ತದೆ. ಹೊಸ ನಿರೀಕ್ಷೆ, ಭರವಸೆಗಳು ಅಂಕುರಿಸುತ್ತವೆ. ಸಕಾರಾತ್ಮಕ ಮನೋಭಾವದಿಂದ ಯುಗಾದಿ ಆಚರಿಸಿದಾಗ, ನಮ್ಮಲ್ಲಿ ಆಗುವ ಬದಲಾವಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ.
ರಾಜ್ಯದೆಲ್ಲೆಡೆ ಈಗ ಯುಗಾದಿಯ ಸಂಭ್ರಮ. ಯುಗಾದಿಯ ಆಚರಣೆಗೆ ಪೌರಾಣಿಕ ಹಿನ್ನೆಲೆ ಇದೆ. ಇದು ಯುಗದ ಆದಿ. ಅಂದರೆ ಹೊಸವರ್ಷ ಉದಯಿಸಿದ ಸಂಕೇತ. ಪುರಾಣದ ಪ್ರಕಾರ ಬ್ರಹ್ಮದೇವನು ಯುಗಾದಿಯ ದಿನದಂದು ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದ. ದಿನಗಳು, ವಾರಗಳು, ಮಾಸಗಳು, ವರ್ಷಗಳು ಈ ಕ್ರಮದಲ್ಲಿ ವಿಶ್ವದ ಸೃಷ್ಟಿ ಆಯಿತು. ಆದ್ದರಿಂದ ಯುಗಾದಿಗೆ ಮಹತ್ತರವಾದ ವೈಶಿಷ್ಟ್ಯವಿದೆ. ಶತಮಾನಗಳು ಉರುಳಿ, ಕಾಲಮಾನ ಬದಲಾಗುತ್ತಿದ್ದರೂ ಕೂಡ ಯುಗಾದಿಯ ಆಚರಣೆಯು ಸ್ಥಗಿತಗೊಳ್ಳದೆ ಮುಂದುವರಿದಿದೆ.
ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣುವನ್ನು ಯುಗಾದಿಕೃತ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಯುಗದ ಕರ್ತೃ ಎಂದು ಇದರ ಅರ್ಥ. ಯುಗಾದಿ ದಿನದಂದು ಮಹಾವಿಷ್ಣುವಿನ ಪೂಜೆ ಶ್ರೇಷ್ಠ ಎಂಬ ನಂಬಿಕೆ ಇದೆ.
ಸೌರಮಾನ ಪದ್ಧತಿಯ ಪ್ರಕಾರ, ಯುಗಾದಿಯ ದಿನದಂದು ಹೊಸ ಖಗೋಳ ಚಲನೆ ಪ್ರಾರಂಭವಾಗುತ್ತದೆ. ಭೂಮಿಯ ವಾಲುವಿಕೆಯಿಂದ ಉತ್ತರ ಭೂಭಾಗದಲ್ಲಿ 21 ದಿನಗಳ ಕಾಲ ಸೂರ್ಯನು ಗರಿಷ್ಠ ಪ್ರಮಾಣದಲ್ಲಿ ಪ್ರಜ್ವಲಿಸುತ್ತಾನೆ. ಈ ಅವಧಿಯಲ್ಲಿ ಸೂರ್ಯನ ಶಕ್ತಿ ವೃದ್ಧಿಸುತ್ತದೆ.
ಪ್ರಾಕೃತಿಕ ಮಹತ್ವ :
ಅಂತರಿಕ್ಷದಲ್ಲಿ ಆಗುವ ಬದಲಾವಣೆಯ ಫಲವಾಗಿ ಭೂಮಿಯಲ್ಲಿ ಕೂಡ ಋತುಮಾನ ಬದಲಾಗುತ್ತದೆ. ಯುಗಾದಿಯು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ. ಗಿಡಮರಗಳು ಚಿಗುರೊಡೆದು ಕಂಗೊಳಿಸುತ್ತವೆ. ಭೂಮಿಯು ಹಸಿರಿನ ಹೊದಿಕೆಯಿಂದ ರಾರಾಜಿಸುತ್ತದೆ. ಪ್ರಕೃತಿಯಲ್ಲಿ ನವ ಚೇತನ ಮೂಡುತ್ತದೆ. ಅಂದು ಪ್ರಾರಂಭವಾಗುವ ವಸಂತ ನವರಾತ್ರಿಯು ಶ್ರೀರಾಮನವಮಿ ಯವರೆಗೆ ಮುಂದುವರೆಯುತ್ತದೆ.
ಯುಗಾದಿಯು ಪ್ರಕೃತಿಯ ಪುನರುಜ್ಜೀವನಕ್ಕೆ ಹೇಗೆ ಕಾರಣವಾಗುತ್ತದೆಯೋ, ಅದೇ ರೀತಿ ಮನುಷ್ಯನ ಜೀವನದ ಮೇಲೂ ನೂತನವಾದ ಪರಿಣಾಮ ಬೀರುತ್ತದೆ. ಹೊಸ ನಿರೀಕ್ಷೆ, ಭರವಸೆಗಳು ಅಂಕುರಿಸುತ್ತವೆ. ಸಕಾರಾತ್ಮಕ ಮನೋಭಾವದಿಂದ ಯುಗಾದಿಯನ್ನು ಆಚರಿಸಿದಾಗ, ನಮ್ಮಲ್ಲಿ ಆಗುವ ಬದಲಾವಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಯುಗಾದಿಯ ಆಚರಣೆಗೆ ಅನಾದಿಕಾಲದಿಂದಲೂ ನಿರ್ದಿಷ್ಟ ವಿಧಿ ವಿಧಾನವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ಮುನ್ನಾ ದಿನ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು, ಅಭ್ಯಂಜನ ಮಾಡಿ ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸುತ್ತಾರೆ. ಇದು ಹೊಸತನದ ಸಂಕೇತ.
ಆಚರಣಾ ವಿಧಾನ :
ಯುಗಾದಿ ಅಂದರೆ ಸಂಭ್ರಮ-ಸಡಗರ. ಮನುಷ್ಯರ ಹಾಗೆ ಅಂದು ದೇವತಾ ಮೂರ್ತಿಗಳಿಗೂ ಅಭಿಷೇಕ ಮಾಡಿ ಹೊಸವಸ್ತ್ರ, ಹೂವಿನಿಂದ ಅಲಂಕರಿಸಲಾಗುತ್ತದೆ. ಮನೆಯ ಹೆಬ್ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ಆ ಕಡೆ ಈ ಕಡೆ ಬೇವಿನ ಎಲೆಗಳನ್ನು ಇಡಲಾಗುತ್ತದೆ. ಮನೆಯ ಮುಂದೆ ರಂಗು ರಂಗಿನ ಸುಂದರ ರಂಗೋಲಿ ಕಂಗೊಳಿಸುತ್ತದೆ. ದೇವಾಲಯಗಳಲ್ಲಿ ಘಂಟಾನಾದ ಮೊಳಗುತ್ತದೆ. ಮನೆಯಲ್ಲಿ ಪೂಜೆ ಮಾಡಿದ ನಂತರ ಆಸ್ತಿಕರು ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿ ವರ್ಷವಿಡೀ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಸೂರ್ಯದೇವನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಯುಗಾದಿಯ ಪ್ರಮುಖ ಆಚರಣೆಗಳ ಪೈಕಿ ಪಂಚಾಂಗ ಶ್ರವಣವೂ ಒಂದು. ದೇವರಪೂಜೆ ಆದ ನಂತರ ಕುಟುಂಬದ ಹಿರಿಯ ಸದಸ್ಯರು ಹೊಸ ಪಂಚಾಂಗದ ಪುಟವನ್ನು ತೆರೆದು ಪಂಚಾಂಗ ಫಲವನ್ನು ಓದುತ್ತಾರೆ. ಇದಾದ ನಂತರ ಬೇವು ಬೆಲ್ಲದ ಸೇವನೆ. ಕೆಲವು ಕಡೆ ಇದನ್ನು ಯುಗಾದಿ ಪಚಡಿ ಎಂದು ಕರೆಯುತ್ತಾರೆ. ಈ ಖಾದ್ಯಕ್ಕೆ ವೈಜ್ಞಾನಿಕ ಮಹತ್ವವೂ ಇದೆ.

#ಬೇವಿನ ಹೂವು: ಇದು ಕಹಿ. ಕಷ್ಟದ ಸಂಕೇತ.
#ಹುಣಸೆ ಹಣ್ಣು: ಹುಳಿಯಾಗಿರುವ ಇದು ಸವಾಲುಗಳ ಸಂಕೇತ.
#ಮೆಣಸಿನ ಪುಡಿ: ಖಾರವಾದ ಗುಣದಿಂದ ಕೂಡಿದ ಇದು ಕೋಪವನ್ನು ಪ್ರತಿನಿಧಿಸುತ್ತದೆ.
#ಮಾವಿನ ಕಾಯಿ: ಒಗರಾದ ಇದು ಅಚ್ಚರಿಯ ಸಂಕೇತ.
#ಉಪ್ಪು: ಇದು ಬದುಕಿನ ಆಸಕ್ತಿಯನ್ನು ಪ್ರತಿನಿಧಿಸುತ್ತದೆ.
#ಬೆಲ್ಲ: ಸಿಹಿಯಾಗಿರುವ ಇದು ಸಂತೋಷದ ಸಂಕೇತ.

ಈ ಆರು ಪದಾರ್ಥಗಳನ್ನು ಬೆರೆಸಿ ಪಚಡಿಯನ್ನು ತಯಾರಿಸುತ್ತಾರೆ. ಕಹಿಯಿಂದ ಪ್ರಾರಂಭವಾದ ಇದು ಸಿಹಿಯೊಂದಿಗೆ ಸಂಪನ್ನಗೊಳ್ಳುತ್ತದೆ. ಮನೆಯ ಹಿರಿಯ ವ್ಯಕ್ತಿಯು ಇದನ್ನು ಎಲ್ಲರಿಗೂ ಕೊಡುತ್ತಾರೆ. ಅದನ್ನು ಹಿಡಿದುಕೊಂಡು “ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಂ” ಎಂಬ ಶ್ಲೋಕವನ್ನು ಹೇಳಿ ಸೇವಿಸಬೇಕು. ಹೀಗೆ ಮಾಡುವುದರಿಂದ ಅನಿಷ್ಟಗಳೆಲ್ಲ ನಾಶವಾಗಿ ಜೀವನವು ಸಂಪದ್ಭರಿತವಾಗಿರುತ್ತದೆ ಎಂಬ ನಂಬಿಕೆ ಇದೆ.
ಈ ವರ್ಷ ಶನಿವಾರದಂದು ಯುಗಾದಿ ಬಂದಿದೆ. ನವನಾಯಕರ ಪೈಕಿ ಶನಿಯು ರಾಜನ ಸ್ಥಾನ ಅಲಂಕರಿಸುತ್ತಾನೆ. ಮಂತ್ರಿಯಾಗಿ ಸೂರ್ಯ, ಸಸ್ಯಾಧಿಪತಿಯಾಗಿ ಹಾಗೂ ನೀರಸಾಧಿಪತಿಯಾಗಿ ಬುಧ, ರಸಾಧಿಪತಿಯಾಗಿ ಶುಕ್ರ, ಧಾನ್ಯಾಧಿಪತಿಯಾಗಿ ಚಂದ್ರ, ಮೇಘಾಧಿಪತಿ ಹಾಗೂ ಅರ್ಘ್ಯಾಧಿಪತಿಯಾಗಿ ಶನಿ, ಪಶುಗಳ ನಾಯಕನಾಗಿ ಬಲರಾಮ ಕಾರ್ಯನಿರ್ವಹಿಸುತ್ತಾರೆ. ಈ ಲೆಕ್ಕಾಚಾರದ ಪ್ರಕಾರ, ಈ ವರ್ಷ ಮಳೆಯ ಪ್ರಮಾಣ ಕಡಿಮೆ. ಜೀವನಾಗತ್ಯ ವಸ್ತುಗಳ ಅಭಾವ ಉಂಟಾಗುತ್ತದೆ. ಕಷ್ಟ ಮತ್ತು ಸುಖವನ್ನು ಸಮಾನವಾಗಿ ಸ್ವೀಕರಿಸಬೇಕು ಅನ್ನುವುದು ಯುಗಾದಿ ಹಬ್ಬದ ಸಂದೇಶ. ಇದರ ಸೂಚಕವಾಗಿ ನಾವು ಬೇವು ಮತ್ತು ಬೆಲ್ಲವನ್ನು ಸ್ವೀಕರಿಸುತ್ತೇವೆ. ಕಹಿಯ ನಕಾರಾತ್ಮಕತೆಯನ್ನು ಪ್ರತಿನಿಧಿಸಿದರೆ, ಸಿಹಿಯು ಸಕಾರಾತ್ಮಕತೆಯ ಸಂಕೇತ.ನಕಾರಾತ್ಮಕತೆಯನ್ನು ಮೆಟ್ಟಿ, ಸಕಾರಾತ್ಮಕ ಮನೋಭಾವ ವನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು ಎಂಬ ಸಿದ್ಧಾಂತ ಅಡಗಿದೆ.

ಸಹಭೋಜನ:
ಹಬ್ಬ ಅಂದ ಮೇಲೆ ಸಹಭೋಜನ ಇರಲೇಬೇಕು. ಯುಗಾದಿಯಂದು ಸಾಮಾನ್ಯವಾಗಿ ಹೋಳಿಗೆ ಮಾಡುತ್ತಾರೆ. ಮಾವಿನ ಕಾಯಿ ಚಿತ್ರಾನ್ನ, ಕೋಸಂಬರಿ, ಗಸಗಸೆ ಪಾಯಸ ಇವು ಹಬ್ಬದಡುಗೆಯ ಇತರ ಖಾದ್ಯಗಳು. ನೆಂಟರಿಷ್ಟರೊಡಗೂಡಿ ಸಂತಸದಿಂದ ಸಹಭೋಜನ ಮಾಡುವುದು ಸಂಪ್ರದಾಯ.

ವೀಕ್ಷಿಸಿ SUBSCRIBERS ಮಾಡಿ


Leave a Reply

error: Content is protected !!