ನೇಸರ ಎ.27: ಕಡಬ ತಾಲೂಕಿನ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ 2ನೇ ವಾರ್ಡಿನ ಕರ್ತಡ್ಕ ಎಂಬಲ್ಲಿ ತೋಡಿಗೆ ಸೇತುವೆ ಇಲ್ಲದೆ ಸ್ಥಳೀಯರೇ ಅಡಿಕೆ ಮರದ ಪಾಲ ನಿರ್ಮಿಸಿ ಅದರ ಮೇಲೆ ಸಂಚರಿಸುತ್ತಿದ್ದರು. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಮಳೆಗಾಲದಲ್ಲಿ ಅಪಾಯಕಾರಿ ಪಾಲದಲ್ಲಿ ಸಂಚರಿಸಬೇಕಿತ್ತು. ಬೇಸಗೆಯಲ್ಲಿ ತೋಡಿಗೆ ಪೈಪ್ ಅಳವಡಿಸಿ ರಸ್ತೆ ನಿರ್ಮಿಸುತ್ತಿದ್ದರು.
ಸರ್ವಋತು ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳ ಸ್ಥಳೀಯ ಬೇಡಿಕೆ ಇತ್ತು. ಫಲಾನುಭವಿಗಳ ಮನವಿಗೆ ಇದೀಗ ಸ್ಪಂದನೆ ದೊರೆತಿದೆ. ಲೋಕೋಪಯೋಗಿ ಇಲಾಖೆಯ ಗ್ರಾಮ ಬಂಧ ಸೇತು ಯೋಜನೆಯಡಿ ಇಲ್ಲಿ ಸೇತುವೆ ನಿರ್ಮಾಣವಾಗಲಿದ್ದು, ಸುಮಾರು 18 ಲಕ್ಷ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿ ಈಗ ಆರಂಭಗೊಂಡಿದೆ. ನವನೀತ್ ಎಂಬವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸುವ ಸೂಚನೆ ನೀಡಲಾಗಿದೆ.
🌸 ಜಾಹೀರಾತು 🌸