ಸೌತಡ್ಕ ಆಡಳಿತ ಮಂಡಳಿ ನಿರ್ಧಾರಕ್ಕೆ ಸ್ಥಳೀಯ ಭಕ್ತಾದಿಗಳಲ್ಲಿ ಅಪಸ್ವರ

ಶೇರ್ ಮಾಡಿ

ನೇಸರ ಎ.27: ಇಲ್ಲಿನ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಭದ್ರತೆಯ ಕಾರಣದಿಂದ ದೇವಳದ ಹಿಂಬದಿಯ ಪ್ರವೇಶದ್ವಾರಕ್ಕೆ ಗೇಟ್ ಅಳವಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ಸುಮುಖ ಅನ್ನ ಛತ್ರದ ಬಳಿಯಿಂದ ದೇವಸ್ಥಾನದ ಒಳ ಬರುವ ರಸ್ತೆಗೆ ಗೇಟ್ ಅಳವಡಿಸಲಾಗಿದ್ದು ಈ ರಸ್ತೆಯಿಂದ ಬರುವ ಎಲ್ಲಾ ಭಕ್ತಾದಿಗಳ ವಾಹನಗಳು ಬೈಪಾಸ್ ರಸ್ತೆಯ ಮೂಲಕ ದೇವಸ್ಥಾನದ ಎದುರು ಭಾಗದಿಂದಲೇ ಬಂದು ದೇವರ ದರ್ಶನ ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿಯವರು ರಸ್ತೆಯನ್ನು ಬಂದ್ ಮಾಡಿದ್ದಾರೆ.
ಏಪ್ರಿಲ್ ೧೮ರಂದು ದೇವಳದ ಭಕ್ತರೊಬ್ಬರ ಪರ್ಸಿನಲ್ಲಿದ್ದ ಮೂರೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಇದುವರೆಗೂ ಕಳ್ಳನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ…!!
ಈ ಕ್ಷೇತ್ರವು ಬಯಲು ಆಲಯವಾಗಿರುವ ಕಾರಣ ಕ್ಷೇತ್ರದ ಸ್ವತ್ತಿನ ಭಧ್ರತೆಯ ಕಾರಣದಿಂದಲೂ ಹಾಗೂ ಈ ಹಿಂದೆಯೂ ಅನೇಕ ಬಾರಿ ಭಕ್ತಾದಿಗಳ ಮೌಲ್ಯಯುತ ಸ್ವತ್ತಿನ ಕಳವಾಗಿದ್ದು, ಕಳ್ಳರು ಯಾವ ರಸ್ತೆಯಿಂದ ಪರಾರಿಯಾಗುತ್ತಾರೆ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗದ ಕಾರಣ ಭಕ್ತಾದಿಗಳ ಸ್ವತ್ತಿನ ಭದ್ರತೆಯ ದೃಷ್ಟಿಯಿಂದಲೂ ಈ ಗೇಟನ್ನು ಅಳವಡಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಭಿಪ್ರಾಯ.
ಆದರೆ ಸಾರ್ವಜನಿಕ ವಲಯದಲ್ಲಿ ಅಪಸ್ವರಗಳು ಕೇಳಿ ಬರುತ್ತಿದ್ದು, ನೂರಾರು ವರುಷಗಳಿಂದ ಸ್ಥಳೀಯ ನಿವಾಸಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದು ಸ್ಥಳೀಯರು, ರೈತರು ಸಂಚರಿಸುವ ದಾರಿ ಇದಾಗಿದ್ದು ಯಾವುದೇ ಸೂಚನೆ ನೀಡದೆ ಇದೀಗ ಏಕಾಏಕಿ ಗೇಟ್ ನಿರ್ಮಾಣ ಸರಿಯಲ್ಲ ಎನ್ನಲಾಗುತ್ತಿದೆ. ತಂತ್ರಜ್ಞಾನ ಮುಂದುವರಿಯುತ್ತಿರುವ ಈ ಕಾಲದಲ್ಲಿ ಸಿಸಿ ಕ್ಯಾಮರ ದಂತಹ ವ್ಯವಸ್ಥೆಗಳಿದ್ದರೂ ಭದ್ರತೆಯ ಕಾರಣಕ್ಕೆ ಗೇಟ್ ಅಳವಡಿಸಿರುವ ವಿಷಯ ವಿಪರ್ಯಾಸ ಎಂದು ಸ್ಥಳೀಯರ ಅಭಿಪ್ರಾಯ.
ಸೌತಡ್ಕ ಮಹಾಗಣಪತಿ ದರ್ಶನಕ್ಕೆ ಮುಕ್ತನಾಗಿದ್ದು ಅವನ ದರ್ಶನಕ್ಕೆ ಬರುವ ದಾರಿಗಳಿಗೆ ನಿರ್ಬಂಧ ವೇಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈ ದಾರಿಯಲ್ಲಿ ಸಂಚರಿಸುವ ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು ದಿನಾಲು ದೇವರ ದರ್ಶನವನ್ನು ಪಡೆದು ತೆರಳುವುದು ಪರಿಪಾಠವಾಗಿತ್ತು. ಆದರೆ ಇದೀಗ ದೇವರ ದರ್ಶನ ಪಡೆಯಲು ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಉಂಟಾಗಿದೆ. ಆಡಳಿತ ಮಂಡಳಿ ಸ್ಥಳೀಯ ಭಕ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಗೇಟ್ ನಿರ್ಮಾಣದ ಬಗ್ಗೆ ಯೋಚಿಸಬೇಕು ಎನ್ನುವುದು ಇಲ್ಲಿಯವರ ಅಭಿಪ್ರಾಯ.

 

💮 ಜಾಹೀರಾತು 💮

Leave a Reply

error: Content is protected !!