94ಸಿ, ಅಕ್ರಮ ಸಕ್ರಮ ಅರ್ಜಿಗಳು ಗ್ರಾ.ಪಂ. ವ್ಯಾಪ್ತಿಯಲ್ಲಿಯೇ ಪರಿಶೀಲನೆಗೆ ಒಳಪಡಬೇಕು ಕಡಬದಲ್ಲಿ ಜಿಲ್ಲಾಧಿಕಾರಿ ಸೂಚನೆ

ಶೇರ್ ಮಾಡಿ

ನೇಸರ ಎ.30: ಅಕ್ರಮ ಸಕ್ರಮ, 94 ಸಿ ಅರ್ಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿಯೇ ಪರಿಶೀಲನೆಗೆ ಒಳಪಟ್ಟು ಸರಿಯಾಗಿ ಪರಿಶೀಲಿಸಿ, ಗ್ರಾ.ಪಂ ಹಂತದಲ್ಲೇ ಅರ್ಜಿಗಳು ಮಂಜೂರಾತಿಗೆ ಯೋಗ್ಯವಾಗಿವೆಯೇ ಎಂದು ನಿರ್ಧಾರವಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿದ್ದಾರೆ.

ಅವರು ಶುಕ್ರವಾರ ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಕಡತ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮಕರಣಿಕರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಸಮಸ್ಯೆ ಪರಿಹಾರವಾಗುತ್ತದೆ. ಗ್ರಾಮ ಕರಣಿಕರಿಗೆ ಸರಿಯಾದ ಕಟ್ಟಡದ ವ್ಯವಸ್ಥೆ ಇಲ್ಲದಿದ್ದಲ್ಲಿ ಪಿಡಿಒ ದುರಸ್ತಿ ಮಾಡಿಕೊಡುವ ಬಗ್ಗೆ ಗಮನಹರಿಸಬೇಕು ಅಥವಾ ಪಂಚಾಯಿತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಗ್ರಾಮ ಪಂಚಾಯಿತಿಗೆ ಗ್ರಾಮದಲ್ಲಿನ ಸರಕಾರಿ ಜಾಗಗಳ ಸಂಪೂರ್ಣ ಮಾಹಿತಿ ಇರಬೇಕು, ಹಾಗೂ ಅದರ ರಕ್ಷಣೆ ಪಂಚಾಯಿತಿಯದ್ದಾಗಿರುತ್ತದೆ. ಅದೇ ರೀತಿ ೯೪ ಸಿ ಹಾಗೂ ಅಕ್ರಮ-ಸಕ್ರಮ ಅರ್ಜಿಗಳು ಗ್ರಾಮ ಪಂಚಾಯಿತಿಗಳ ಅವಗಾಹನೆಗೆ ಬಂದು ಕಡತಗಳು ಮತ್ತೆ ಮುಂದುವರಿಯಬೇಕು, ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಮಾಹಿತಿಯ ಪಟ್ಟಿ ಗ್ರಾಮ ಪಂಚಾಯಿತಿ ಬಳಿ ಇರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾನೆಯೆ?, ಮನೆ ತೆರಿಗೆ ಪಾವತಿಸಿದ್ದಾನೆಯೆ?, ವಿದ್ಯುತ್ ಬಿಲ್ ಪಾವತಿಸಿದ್ದಾನೆಯೆ?, ಮುಂತಾದ ನಿಯಮಾವಳಿಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು, ಈಗಾಗಲೇ ೯೪ ಸಿ ಯಲ್ಲಿ ಹಕ್ಕು ಪಡೆದವರಲ್ಲಿ ಕೆಲವರಿಗೆ ಬೋಗಸ್ ಆಗಿ ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನುವ ದೂರು ಬಂದಿವೆ. ಹಾಗೂ ಇತ್ತೀಚೆಗೆ ನೀಡಿರುವ ಅರ್ಜಿಗಳಂತು ಬಹುತೇಕ ಬೋಗಸ್ ಇವೆ ಆದ್ದರಿಂದ ಪರಿಶೀಲಿಸಿ ಅರ್ಹರಿಗೆ ಮಾತ್ರ ಹಕ್ಕುಪತ್ರ ದೊರೆಯುವಂತಾಗಲು ಗ್ರಾ.ಪಂ ನಿರಾಕ್ಷೇಪಣಾ ಪತ್ರ ನೀಡಬೇಕು ಹಾಗೂ ಅಕ್ರಮ ಸಕ್ರಮದಡಿಯಲ್ಲಿ ಕೂಡಾ ಕಾನೂನು ಬಾಹಿರವಾಗಿ ಹಕ್ಕು ಪತ್ರ ನೀಡಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅದರ ಅರ್ಜಿಗಳು ಹಾಗೂ ಈಗಾಗಲೇ ಮಂಜೂರಾಗಿರುವ ಭೂಮಿಯ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಪರಿಶೀಲನೆಗೆ ಒಳಗಾಗಬೇಕು, ಅಕ್ರಮ ಸಕ್ರಮ ಮಂಜೂರಾತಿ ನೀಡುವಾಗ ಕಂದಾಯ ಇಲಾಖೆಯವರು ಅಲ್ಲಿ ರಸ್ತೆ, ದಾರಿ ಇರುವ ಬಗ್ಗೆ ನಮೂದಿಸಬೇಕು, ಆ ಭೂಮಿಯ ಅಕ್ಕ ಪಕ್ಕದ ಜನರಿಗೆ ಅನುಕೂಲವಾಗುವಂತೆ ಕನಿಷ್ಟ 8 ರಿಂದ 10 ಅಡಿ ಕಾಲು ದಾರಿ ನಮೂದಿಸಬೇಕು ಆಗ ದಾರಿ ಸಮಸ್ಯೆಗಳು ಉದ್ಭವವಾಗುವುದಿಲ್ಲ. ಈ ವಿಚಾರದಲ್ಲಿ ಗ್ರಾಮ ಕರಣಿಕ ಹಾಗೂ ಪಿಡಿಒಗಳು ರಾಜಿ ಮಾಡಿಕೊಳ್ಳುವಂತಿಲ್ಲ. ಇನ್ನು ಒಂದು ತಿಂಗಳಲ್ಲಿ ಮಾಡಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಗ್ರಾಮ ಕರಣಿಕ, ಪಿಡಿಒ ದಿನಚರಿ ನಾಮಫಲಕದಲ್ಲಿ ವಾರಕ್ಕೆ ಕನಿಷ್ಠ ಮೂರು ದಿನವಾದರೂ ಗ್ರಾಮದ ಕಚೇರಿಯಲ್ಲಿರಬೇಕು, ವಿಎ ಗಳ ಅನುಪಸ್ಥಿತಿಯಲ್ಲಿ ಗ್ರಾಮ ಸೇವಕರಾದರೂ ಹಾಜರಿರಬೇಕು, ಗ್ರಾಮಕರಣಿಕರು ಕಛೇರಿಯಲ್ಲಿರುವ ಮಾಹಿತಿಯನ್ನು ಮುಂಚಿತವಾಗಿ ತಿಳಿಸಿರಬೇಕು, ನಾಮಫಲಕದಲ್ಲಿ ನಮೂದಿಸಬೇಕು. ಇದು ಗ್ರಾಮ ಪಂಚಾಯಿತಿಗಳಲ್ಲಿ ಕೂಡಾ ಕಡ್ಡಾಯವಾಗಿದೆ ಆ ಮೂಲಕ ಗ್ರಾಮಕರಣಿಕರು ಹಾಗೂ ಗ್ರಾ.ಪಂ ಪಿಡಿಒಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದಾಗ ಜನರ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಪ್ಲಾಟಿಂಗ್ ಅರ್ಜಿ-ಮೇ ಅಂತ್ಯದೊಳಗೆ ವಿಲೇವಾರಿ:
ಪ್ಲಾಟಿಂಗ್ ಸಮಸ್ಯೆ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಯವರು ಮೇ ಅಂತ್ಯದ ಒಳಗೆ ಪ್ಲಾಟಿಂಗ್‌ಗೆ ಬಂದ ಅರ್ಜಿಗಳನ್ನು ವಿಲೆವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಪಡೆಯುವಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್‌ನಂದನ್, ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ, ಭೂದಾಖಲೆಗಳ ಜಿಲ್ಲಾ ಉಪನಿರ್ದೆಶಕ ನಿರಂಜನ್ ಉಪಸ್ಥಿತರಿದ್ದರು. ಕಡಬ ತಹಸೀಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಕಡಬ ಉಪತಹಸೀಲ್ದಾರ್‌ಗಳಾದ ನವ್ಯ, ಕೆ.ಟಿ.ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಮಗತ್ತ್‌ಮಲೆ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಭೂದಾಖಲೆಗಳ ಸಹಾಯಕ ನಿರ್ದೆಶಕಿ ರಮಾ ದೇವಿ, ಕಡಬ ತಾಲೂಕು ಪಂಚಾಯಿತಿ ಯೋಜನಾ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಪಕೀರ ಮೂಲ್ಯ, ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಅಧಿಕಾರಿಗಳು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಅಂತವರನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಸೇರಿ ಎಲ್ಲಾ ಕಂದಾಯ ಅಧಿಕಾರಿಗಳಿಗೆ ತರಾಟೆ ತಗೊಂಡ ಜಿಲ್ಲಾಧಿಕಾರಿಯವರು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹೋದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದರು.

 

💐 ಜಾಹೀರಾತು 💐

Leave a Reply

error: Content is protected !!