ಗ್ರಾಮಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳದಿರುವುದು, ಬಂದಂತಹ ಕೆಲವು ಅಧಿಕಾರಿಗಳು ಅವರ ಇಲಾಖೆಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ನೀಡಿ ಸಭೆ ಮುಗಿಯುವರೆಗೆ ನಿಲ್ಲದೆ ತೆರಳಿರುವುದು, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತ್ಯಂತ ನೀರಸವಾಗಿದ್ದು ಎದ್ದು ಕಾಣುತ್ತಿತ್ತು.
ನೇಸರ ಮೇ.10: ಕೊಕ್ಕಡ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯು ಮೇ.9ರಂದು ಅಂಬೇಡ್ಕರ್ ಭವನದಲ್ಲಿ ಅಧ್ಯಕ್ಷ ಯೋಗೀಶ್ ಆಲಂಬಿಲ ರವರ ಅಧ್ಯಕ್ಷತೆಯಲ್ಲಿ ಜರಗಿತು. ಜಯಕೀರ್ತಿ ಜೈನ್ ನೋಡಲ್ ಅಧಿಕಾರಿಯಾಗಿದ್ದರು. ರಾಜ್ಯ ಹೆದ್ದಾರಿ 37ರ ಪೆರಿಯ ಶಾಂತಿಯಿಂದ ಕೊಕ್ಕಡದವರೆಗೆ ಅರಣ್ಯ ಇಲಾಖೆಯ ವ್ಯಾಪ್ತಿಯಡಿ ಅನಧಿಕೃತ ಗೂಡಂಗಡಿಗಳು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳು ದಿನೇದಿನೇ ಹೆಚ್ಚುತ್ತಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈ ಬಗ್ಗೆ ಪಂಚಾಯಿತಿಗೆ ನೋಟಿಸ್ ನೀಡಲಾಗಿದೆ ಎಂದರು. ಪ್ರತ್ಯುತ್ತರವಾಗಿ ಪಂಚಾಯತ್ ಅಧ್ಯಕ್ಷರು ಇದು ಅರಣ್ಯ ಇಲಾಖೆಯ ಜಾಗದಲ್ಲಿರುವ ಕಾರಣ ಪಂಚಾಯತ್ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಹಾಗಾಗಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಈ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿ ಎಂದರು.
ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಕೊಕ್ಕಡದ ಪಂಚಾಯತ್ ವ್ಯಾಪ್ತಿಯ ಕೆಲವು ಕಡೆ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ ಅಂತಹ ವಿದ್ಯಾರ್ಥಿಗಳ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪೋಷಕರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಈಗಾಗಲೇ ಅನೇಕ ಬಾರಿ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗೆ ಬರುವಂತೆ ಒತ್ತಾಯಿಸಿದ್ದೇವೆ. ಪ್ರತಿಬಾರಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗುವುದಾದರೆ ಶಾಲೆಯ ಪಠ್ಯ ಚಟುವಟಿಕೆಗಳು ಹಿಂದುಳಿಯುತ್ತದೆ ಎಂದರು. ಸೌತಡ್ಕ ದೇವಾಲಯದ ಆಡಳಿತಮಂಡಳಿಯವರು ಸಾರ್ವಜನಿಕ ರಸ್ತೆಯೊಂದಕ್ಕೆ ಗೇಟು ಅಳವಡಿಸಿದ ಬಗ್ಗೆ ಗ್ರಾಮಸ್ಥರೊಬ್ಬರು, ದೂರು ನೀಡಿ ಹಲವು ದಿನಗಳಾದರೂ ಏಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಅಧ್ಯಕ್ಷರು ಸಂಬಂಧ ಪಟ್ಟವರಿಗೆ ಈ ಬಗ್ಗೆ ಇಂದು ಸಂಜೆಯೊಳಗೆ ನೋಟೀಸ್ ನೀಡುತ್ತೇವೆ ಎಂದರು. ಕೊಕ್ಕಡದಿಂದ ಪಟ್ಟೂರುವರೆಗಿನ ರಸ್ತೆಗಳು ಕಳಪೆಯಾಗಿದ್ದು ಇದರ ನಿರ್ವಹಣೆ ಯಾಕೆ ಆಗಿಲ್ಲವೆಂದು ಗ್ರಾಮಸ್ಥರು ಪ್ರಶ್ನಿಸಿದಾಗ ಇದು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಸೇರಿದ ರಸ್ತೆಯಾಗಿರುವ ಕಾರಣ ಪಂಚಾಯತ್ ವತಿಯಿಂದ ನಿರ್ವಹಣೆ ಸಾಧ್ಯವಿಲ್ಲ ಎಂದು ಅಧ್ಯಕ್ಷರು ಉತ್ತರಿಸಿದರು.
ಕೊಕ್ಕಡದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಇಲ್ಲಿ ವೈದ್ಯಾಧಿಕಾರಿಗಳಿಲ್ಲ ಜೊತೆಗೆ ಹಿರಿಯ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕ ಅಧಿಕಾರಿಗಳೂ ಇಲ್ಲವೆಂದು ದೂರು ಬಂದವು ಇದಕ್ಕೆ ಅಧ್ಯಕ್ಷರು ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ವಿದ್ಯುತ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗ್ರಾಮಸಭೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳದಿರುವುದು, ಬಂದಂತಹ ಕೆಲವು ಅಧಿಕಾರಿಗಳು ಅವರ ಇಲಾಖೆಗೆ ಸಂಬಂಧಪಟ್ಟ ಕೆಲವು ಮಾಹಿತಿಗಳನ್ನು ನೀಡಿ ಸಭೆ ಮುಗಿಯುವರೆಗೆ ನಿಲ್ಲದೆ ತೆರಳಿರುವುದು, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತ್ಯಂತ ನೀರಸವಾಗಿದ್ದು ಎದ್ದು ಕಾಣುತ್ತಿತ್ತು.
ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಗ್ರಾಮದಲ್ಲಿ ಈವರೆಗೆ ನಡೆದಿರುವ ಹಾಗೂ ಮುಂದೆ ನಡೆಯಲಿರುವ ಕಾಮಗಾರಿಗಳ, ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಸ್ವಾಗತಿಸಿ ಧನ್ಯವಾದವಿತ್ತರು.
🌺 ಜಾಹೀರಾತು 🌺