ನೇಸರ ಮೇ.9: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿ, ಸ್ಥಾಪಕ ನಿವೃತ್ತ ಪ್ರಾಂಶುಪಾಲರಾಗಿದ್ದು, ಪ್ರಸ್ತತ ಸಂಸ್ಥೆಯ ಸಂಚಾಲಕರಾಗಿರುವ ಅಬ್ರಹಾಂ ವರ್ಗೀಸ್ ಹಾಗೂ ನಿವೃತ್ತ ಮುಖ್ಯಶಿಕ್ಷಕಿ ಆನಿ ವರ್ಗೀಸ್ ದಂಪತಿಯ ವೈವಾಹಿಕ ಬದುಕಿನ 50ನೇ ವರ್ಷಾಚರಣೆಯ ಸುವರ್ಣ ಸಂಭ್ರಮ ಮೇ. 8ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಮಿಲೇನಿಯಮ್ ಹಾಲ್ ಸಭಾಂಗಣದಲ್ಲಿ ನಡೆಯಿತು.
ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿಯನ್ನು ಶಾಲಾ ದ್ವಾರದ ಬಳಿಯಿಂದ ಸ್ವಾಗತಿಸಿ, ಆರತಿ ಬೆಳಗಿಸಿ, ಬಿಷಪ್, ಧರ್ಮಗುರುಗಳು ಹಾಗೂ ಅತಿಥಿಗಳ ಜೊತೆಗೆ ವೇದಿಕೆಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಮೂಕಾಂಬಿಕಾ ನೃತ್ಯ ಕಲಾಶಾಲೆ ಪುತ್ತೂರಿನ ದೀಪಕ್ ಹಾಗೂ ಪ್ರೀತಿಕಲಾ ದಂಪತಿಗಳಿಂದ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅತೀ ವಂದನೀಯ ಸಿ.ಎಂ.ಜಾರ್ಜ್ ಕೋರ್ ಎಪಿಸ್ಕೋಪ್ ರವರು ಪ್ರಾರ್ಥನೆ ನೆರವೇರಿಸಿದರು.
ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿ ಪುತ್ರ ಡಾ.ಅಭಿಜಿತ್ ಸ್ವಾಗತಿಸಿದರು. ಕ್ಯಾಲಿಕಟ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಹೆಚ್.ಜಿ.ಪೌಲೋಸ್ ಮಾರ್ ಐರಾನಿಯೋಸ್ ಮೆಟ್ರೋಪಾಲಿಟನ್‌ರವರ ದಿವ್ಯ ಉಪಸ್ಥಿತಿಯಲ್ಲಿ ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಪರಸ್ಪರ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ ಮದುವೆಯ 50ನೇ ವರ್ಷಾಚರಣೆಯ ಸುವರ್ಣ ಸಂಭ್ರಮಾಚರಿಸಿಕೊಂಡರು.
ಪೇಪರ್ ಕಟ್ಟಿಂಗ್‌ನಲ್ಲಿ ವಿಶ್ವದಾಖಲೆ ಬರೆದಿರುವ ನೆಲ್ಯಾಡಿಯ ಪರೀಕ್ಷಿತ್‌ರವರು ಅಬ್ರಹಾಂ ವರ್ಗೀಸ್ ಹಾಗೂ ಅನಿ ವರ್ಗೀಸ್‌ರವರ ಚಿತ್ರವನ್ನು ವೇದಿಕೆಯಲ್ಲಿ ಬಿಡಿಸುವ ಮೂಲಕ ಗಮನ ಸೆಳೆದರು. ಬಳಿಕ ಅಬ್ರಹಾಂ ವರ್ಗೀಸ್‌ರವರ ಬಾಲ್ಯದಿಂದ ಇಲ್ಲಿಯ ತನಕದ ಜೀವನದ ಕುರಿತ ಸಾಕ್ಷ್ಯ ಚಿತ್ರ , ಅನಿ ವರ್ಗೀಸ್‌ರವರ ಕುರಿತ ಸಾಕ್ಷ್ಯ ಚಿತ್ರ, ಅಬ್ರಹಾಂ ವರ್ಗೀಸ್ ದಂಪತಿಗೆ ವಿವಿಧ ಕಡೆಯ ಗಣ್ಯರು, ವಿದ್ಯಾರ್ಥಿಗಳು ವಿಡಿಯೋ ಮೂಲಕ ಮಾಡಿರುವ ಶುಭ ಹಾರೈಕೆಯನ್ನೂ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಕ್ಯಾಲಿಕಟ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಹೆಚ್.ಜಿ.ಪೌಲೋಸ್ ಮಾರ್ ಐರಾನಿಯೋಸ್ ಮೆಟ್ರೋಪಾಲಿಟನ್, ಅಬ್ರಹಾಂ ವರ್ಗೀಸ್‌ರವರ ಹಿರಿಯ ಸಹೋದರ ವೆಟ್ಟಿಕುನ್ನೇಲ್ ಅಬ್ರಹಾಂ ವರ್ಕಿ, ಪತ್ನಿ ಸಾರಮ್ಮ, ಸಹೋದರಿ ಸೂಸಮ್ಮ, ಪತಿ ಎಂ.ಮಾಣಿ ಉಪಸ್ಥಿತರಿದ್ದರು.
ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್ ದಂಪತಿ ಮಗ ಡಾ.ಅಭಿಜಿತ್, ಪುತ್ರಿ ಬಿಂದು, ಅಳಿಯ ಆಂಜೀವ್, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು, ಸಂತಜಾರ್ಜ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ನಿವೃತ್ತ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಪೂರ್ವ ವಿದ್ಯಾರ್ಥಿಗಳು, ಉದನೆ ಪೋಳಿಕಾರ್ಪೋಸ್ ಶಾಲಾ ಆಡಳಿತ ಮಂಡಳಿ, ವೈಎಂಸಿಎ ದಕ್ಷಿಣ ಪ್ರಾಂತ್ಯದ ಧರ್ಮಗುರುಗಳು, ರೋಟರಿ ಕ್ಲಬ್ ಪುತ್ತೂರು ಸಿಟಿ, ಸೀನಿಯರ್ ಛೇಂಬರ್ ನೆಲ್ಯಾಡಿ, ಜೆಸಿಐ ನೆಲ್ಯಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿ ಅಬ್ರಹಾಂ ವರ್ಗೀಸ್ ದಂಪತಿಗೆ ಹೂ ಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿ ಶುಭಹಾರೈಕೆ ಮಾಡಿದರು.
ಅಬ್ರಹಾಂ ವರ್ಗೀಸ್‌ರವರು ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಧರ್ಮಗುರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಅಬ್ರಹಾಂ ವರ್ಗೀಸ್‌ರವರ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಶ್ರದ್ಧಾ ಭಟ್ ಹಾಗೂ ಮೆರ್‍ಲಿನ್ ಮಂಗಳೂರು ವಿವಿಧ ಹಾಡುಗಳ ಮೂಲಕ ಮನರಂಜಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ ಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
🌺 ಜಾಹೀರಾತು 🌺