ನೇಸರ ಮೇ.14: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ 2021-22 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಕ್ಕಡದಲ್ಲಿ ಆಯೋಜಿಸಲಾಗಿದೆ. ಏಳು ದಿನಗಳ ವಿಶೇಷ ಶಿಬಿರವು ಮೇ 12ರ ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆಗೊಂಡಿತು.
“ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ” ಎಂಬ ಧ್ಯೇಯವಾಕ್ಯದಡಿ ಪ್ರಾರಂಭಗೊಂಡ ವಿಶೇಷ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪಸಿಂಹ ನಾಯಕ್ ರವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ವಾರ್ಷಿಕ ವಿಶೇಷ ಶಿಬಿರವು ಸ್ವಯಂಸೇವಕರಿಗೆ ಜೀವನ ಪಾಠ ಕಲಿಸುವ ಉತ್ತಮ ವೇದಿಕೆ” ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಈ ವೇಳೆ ಮಾತನಾಡಿದ ಅವರು “ಭಾರತ ಸಾವಿರ ಕಂಬಗಳ ಚಪ್ಪರ, ಇಲ್ಲಿ ಸಮಸ್ಯೆಗಳನ್ನು ಸವಾಲುಗಳು ಎಂದು ತಿಳಿಯಬೇಕು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ಬಡತನ ಪ್ರತಿಯೊಬ್ಬರಿಗೂ ಶಾಪವಲ್ಲ ವರ” ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಗೆ ಕುಲಪತಿಗಳು 400 ಪುಸ್ತಕಗಳನ್ನು ಹಾಗೂ ಕಪಾಟನ್ನು ಶಾಲೆಯ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು ಹಾಗೂ ಶಿಬಿರದ ಶಿಬಿರವಾಣಿ ಬಿತ್ತಿ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಶಾಲೆಯ ವತಿಯಿಂದ ಕುಲಪತಿಗಳನ್ನು ಮುಖ್ಯಶಿಕ್ಷಕಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್, ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ನಾಗರತ್ನ ಕೆ.ಎ, ಮಂಗಳೂರು ಪಾಲ್ದಾನೆ ಚರ್ಚಿನ ಧರ್ಮಗುರುಗಳಾದ ಅಲ್ಬನ್ ಡಿಸೋಜ, ಕೊಕ್ಕಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಕೊಕ್ಕಡ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮನೋರಮ ಮತ್ತು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಪ್ರಾಂಶುಪಾಲರಾದ ಪಿ.ಎನ್ ಉದಯಚಂದ್ರರವರು ವಹಿಸಿದ್ದರು. ಕಾರ್ಯಕ್ರಮವನ್ನು ಸ್ವಯಂಸೇವಕಿ ವಂದಿತ ನಿರೂಪಿಸಿದರು. ಯೋಜನಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ ಕೆ ಎಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು, ಶ್ರೀಮತಿ ದೀಪಾ ಆರ್ ಪಿ ವಂದಿಸಿದರು.
🌺 ಜಾಹೀರಾತು🌺