ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದದೊಂದಿಗೆ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ
ನೇಸರ ಮೇ.15: 3000 ವರ್ಷಗಳ ಹಿಂದೆ ಮಯೂರವರ್ಮನ ಕಾಲದಲ್ಲಿ ತುಳು ಮಾಯಿಲ ಎಂಬ ವೀರ ಪುರುಷ ಹತ್ತೂರು ಕಾಣುವ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಎತ್ತರದ ಜಾಗದಲ್ಲಿ ರಕ್ಷಣೆಗಾಗಿ ದೈವಗಳ ಸಾನಿಧ್ಯವನ್ನು ಸ್ಥಾಪಿಸಿದ್ದ. ಅವನ ಕಾಲ ಬಳಿಕ ಈ ಕ್ಷೇತ್ರ ನಶಿಸಿತ್ತು. ಕಾಲಗರ್ಭದಲ್ಲಿ ಅಜೀರ್ಣ ಗೊಂಡಿತ್ತು. ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ತುಳು ಮಾಯಿಲ ಎಂಬ ವೀರಪುರುಷ ಕೊಕ್ಕಡ ಸಮೀಪ ಎತ್ತರ ಪ್ರದೇಶದಲ್ಲಿ ಕೋಟೆ ನಿರ್ಮಾಣಗೊಳಿಸಿ ಹಾಗೂ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದ. ಕೋಟೆ ನಶಿಸಿ ಹೋಗಿ ಆ ಭಾಗದ ಜನರಿಗೆ ಅನೇಕ ರೀತಿಯಲ್ಲಿ ಸಂಕಷ್ಟಗಳು ಒದಗಿ ಬಂದ ಕಾರಣ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ರೀತಿಯಲ್ಲಿ ನಶಿಸಿ ಹೋಗಿದ್ದ ಕೋಟೆಯ ಪುನರ್ ನಿರ್ಮಾಣ ಹಾಗೂ ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸುಮಾರು ೧.೫೦ಕೋಟಿ ರೂ., ವೆಚ್ಚದಲ್ಲಿ ಶಿಲಾಮಯವಾದ ಗುಡಿ ನಿರ್ಮಾಣಗೊಳಿಸಲಾಯಿತು.
ಮೇ 11ರಿಂದ 13ರವರೆಗೆ ಪ್ರತಿಷ್ಠಾ ಮಹೋತ್ಸವ ಕಾರ್ಯಗಳು ನಡೆದು, ಶುಕ್ರವಾರ ರಾತ್ರಿ ದೈವಗಳ ನೇಮೋತ್ಸವ ಆರಂಭಗೊಂಡು ಶನಿವಾರ ಬೆಳಗ್ಗೆ ಎಲ್ಲಾ ಕಾರ್ಯಗಳು ಸಂಪನ್ನಗೊಂಡವು.
ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದದೊಂದಿಗೆ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಅವರ ಮಾರ್ಗದರ್ಶನದಂತೆ ಎಲ್ಲಾ ಕಾರ್ಯಗಳು ನಡೆದವು. ವೈದಿಕ ವಿಧಿ ವಿಧಾನಗಳು ಕ್ಷೇತ್ರದ ತಂತ್ರಿಗಳಾದ ಕೇರಳದ ನೀಲೇಶ್ವರ ಅರಾವತ್ತು ಎಡಮನೆ ಕೆ.ವಿ. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆಯಿತು. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಮಹೋತ್ಸವ ನಡೆಯಿತು. ಕಲ್ಲಡ್ಕ ವಿಠಲ ನಾಯಕ್ ಹಾಗೂ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆದವು.
ಕ್ಷೇತ್ರದ ವಾಸ್ತುಶಿಲ್ಪಿಯಾಗಿ ಕೃಷ್ಣಪ್ರಸಾದ್ ಮುನಿಯಂಗಳ, ದೈವಜ್ಞರಾಗಿ ಶಶೀಂದ್ರ ನಾಯರ್, ಕಾಷ್ಠಶಿಲ್ಪಿಯಾಗಿ ಸುಬ್ರಹ್ಮಣ್ಯ ಆಚಾರಿ ಕೊಕ್ಕಡ, ಕಲ್ಲಿನ ಶಿಲ್ಪಿಯಾಗಿ ಶ್ರೀನಿವಾಸ ಮೀಯಾರು ಕ್ಲಪ್ತ ಸಮಯದಲ್ಲಿ ಕಾರ್ಯನಿರ್ವಹಿಸಿ ಪ್ರತಿಷ್ಠಾ ಮಹೋತ್ಸವಕ್ಕೆ ಸಹಕರಿಸಿದರು. ಕಮಲಾಕ್ಷ ಹಾಗೂ ಕಿಟ್ಟು ತಂಡದವರು ದೈವ ನರ್ತಕರಾಗಿದ್ದರು
ಅಭಯ ನುಡಿದ ದೈವಗಳು
ನಶಿಸಿ ಹೋದ ಈ ದೈವಸ್ಥಾನದಿಂದ ಇಲ್ಲಿನ ಸುತ್ತಮುತ್ತಲಿನವರಿಗೆ ಅಕಾಲಿಕ ಮರಣ, ಸಂಪತ್ತು ನಾಶ, ಆರೋಗ್ಯ ಕ್ಷೀಣ ಸೇರಿದಂತೆ ಹಲವು ಸಮಸ್ಯೆಗಳು ಈ ಹಿಂದೆ ಕಾಣಿಸುತ್ತಿದ್ದವು. ಶುಕ್ರವಾರ ರಾತ್ರಿ ನಡೆದ ನೇಮೋತ್ಸವದಲ್ಲಿ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳು ನರ್ತನದ ಬಳಿಕ, ಭೇದ ಭಾವವಿಲ್ಲದೆ ಎಲ್ಲರೂ ಒಂದಾಗಿ ನೀಡಿದ ಸೇವೆಯಿಂದ ಸಂತೃಪ್ತಗೊಂಡಿರುವುದಾಗಿ, ಮುಂದಿನ ದಿನಗಳಲ್ಲಿ ಈ ಹಿಂದೆ ಆಗುತ್ತಿದ್ದ ಅನಾಹುತಗಳೆಲ್ಲ ಕ್ಷೀಣವಾಗುತ್ತಾ ಹೋಗಿ, ನಂಬಿ ಬಂದ ಭಕ್ತರನ್ನು ಸದಾ ಹರಸುತ್ತಾ ಇರುವುದಾಗಿ ಅಭಯ ನೀಡಿದವು.
ದಾನಿಗಳ ಕೊಡುಗೆ
ದೈವ ಸಾನಿಧ್ಯಕ್ಕೆ ಹಲಸಿನ ಮರ, ದೈವಗಳ ಮೂರ್ತಿ ಹಾಗೂ ಪರಿಕರ, ಶಂಖ, ಅನ್ನದಾನ ಹಾಗೂ ಧನಸಹಾಯವೂ ನಿರೀಕ್ಷೆಗೂ ಮೀರಿ ಬಂದಿತು.
ಹರಿದು ಬಂದ ಭಕ್ತ ಸಾಗರ
ಈ ದೈವ ಸನ್ನಿಧಿಯಲ್ಲಿ ದೈವಗಳು ಪ್ರತಿಷ್ಠಾಪನೆಗೊಂಡು ನೇಮೋತ್ಸವ ನಡೆಯುತ್ತಿರುವುದು ಇದೇ ಮೊದಲು. ಊರ ಪರವೂರ ಸಾವಿರಾರು ಭಕ್ತರು ಕಿಕ್ಕಿರಿದು ಈ ಸಂಭ್ರಮವನ್ನು ಕಣ್ತುಂಬಿಸಿಕೊಂಡರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷ ಜಯರಾಮ ಗೌಡ ಹಾರ, ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ, ಕಾರ್ಯಾಧ್ಯಕ್ಷ ಜಯರಾಮ ಗೌಡ ನ್ಯೂ ಆರಿಗ, ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಎ., ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಟಿ.ಎಮ್., ಡಾ| ಬಿ.ಮೋಹನದಾಸ್ ಗೌಡ, ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿಗಳಾದ ಶೀನ ನಾಯ್ಕ, ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಯೋಗೀಶ್ ಆಲಂಬಿಲ ಸೇರಿದಂತೆ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವ ಸಮಿತಿಯ ಸಂಚಾಲಕರು ಹಾಗೂ ಸದಸ್ಯರ ಜೊತೆಗೆ ಊರ-ಪರವೂರ ಸಂಘ-ಸಂಸ್ಥೆಗಳು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವು. ಸುಳ್ಯದ ಮಾಯಿಲ ಸಮುದಾಯದವರೂ ಕೂಡಾ ಈ ಸಂಭ್ರಮದಲ್ಲಿ ಪಾಲ್ಗೊಂಡರು. ಭಕ್ತಾದಿಗಳು ಉಪಸ್ಥಿತರಿದ್ದರು.
💐 ಜಾಹೀರಾತು 💐