ನೇಸರ ಮೇ 20: ಹೃದಯ ಸಂಬಂಧಿ ಅನಾರೋಗ್ಯದಿಂದ ಕಳೆದ ನಾಲ್ಕು ವರ್ಷಗಳಿಂದ ದುಡಿಯಲು ಹೋಗಲಾಗದೆ ಮನೆಯಲ್ಲೇ ಇರುವ ತಂದೆ…ಹೊಟ್ಟೆಪಾಡಿಗಾಗಿ ಅಲ್ಲಿ ಇಲ್ಲಿ ಕೂಲಿ ಕೆಲಸಕ್ಕೆ ಹೋಗಿ ಗಂಡ ಮತ್ತು ಮೂವರು ಪುತ್ರಿಯರನ್ನು ಓದಿಸಬೇಕಾದ ಹೊಣೆಗಾರಿಕೆಯಿರುವ ತಾಯಿ… ಸ್ವಂತದೆಂದು ಇರುವುದು ಮನೆಯಡಿ ಜಾಗ ಮಾತ್ರ….
ಇದು ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಪಾಲೆಂಜದ ಎಸ್ಸೆಸೆಲ್ಸಿ ಸಾಧಕಿ ನಿಶಿತಾಳ ಯಶೋಗಾಥೆಯ ಲೈಫ್ ಸ್ಟೋರಿ…., ಬಡತನದ ಹಿನ್ನೆಲೆಯ ನಡುವೆಯೂ ನಿಶಿತಾ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ…ಅರಸಿನಮಕ್ಕಿಯ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತಿರುವ ಈಕೆ ಮಾಡಿದ ಸಾಧನೆ ಎಲ್ಲರಿಗೂ ಪ್ರೇರಣೆ.
ಯಾರೀಕೆ ನಿಶಿತಾ?
ಪಾಲೆಂಜದ ಪುರುಷೋತ್ತಮ ಮತ್ತು ಪದ್ಮಾವತಿ ದಂಪತಿಯ ಪುತ್ರಿ. ಈಕೆಗೆ ಇಬ್ಬರು ಸಹೋದರಿಯರು. ಕೂಲಿ ಕೆಲಸಕ್ಕೆ ಹೋಗಿ ಬದುಕಿನ ಬಂಡಿ ಸಾಗಿಸುತ್ತಿದ್ದ ಪುರುಷೋತ್ತಮರವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತು. ಸರಿಯಾದೀತು ಎಂದುಕೊಂಡು ಆಸ್ಪತ್ರೆ ಸೇರಿದರೆ ಮುಂದೆ ಬರೋಬ್ಬರಿ 3 ತಿಂಗಳು 16 ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಮನೆಯ ಜಾಗ ಬಿಟ್ಟರೆ ಬೇರೆ ಆದಾಯವಿಲ್ಲ. ಆಸ್ಪತ್ರೆಯಿಂದ ಮತ್ತೆ ಮನೆಗೆ ಬಂದಾಗ ನೀವಿನ್ನು ಕೆಲಸ ಮಾಡಬಾರದು ಎಂದು ವೈದ್ಯರು ಹೇಳಿದ ನಂತರ ಸಂಸಾರ ಹೇಗೆ ಸಾಗಿಸುವುದು ಎಂಬುದೇ ಚಿಂತೆಯಾಯಿತು. ಜೊತೆಗೆ ಒಂದು ಕಣ್ಣಿಗೂ ಪೊರೆ ಬಂದು ಮನೆಯಲ್ಲೇ ಉಳಿಯಬೇಕಾಯಿತು. ಮೂವರು ಹೆಣ್ಣು ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಅವರ ಪತ್ನಿ ಪದ್ಮಾವತಿಯವರು ವಹಿಸಿಕೊಂಡರು. ಆದರೆ ಇವರು ಕೆಲಸಕ್ಕೆ ಹೋದರೆ ಆದಾಯ ದಿನಕ್ಕೆ 200ರಿಂದ 250ರೂಪಾಯಿ. ಆದರೂ ಈ ದಂಪತಿಗೆ ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ನೀಡಬೇಕು ಎಂಬ ಕನಸಿತ್ತು. ಇದೀಗ ಇವರ ಕನಸಿಗೆ ಹೊಸ ಜೀವ ತುಂಬಿರುವವರು ನಿಶಿತಾ.
ಟ್ಯೂಷನ್ ಇಲ್ಲ, ಮನೆ ಪಾಠವೂ ಇಲ್ಲ…
ಇಷ್ಟೊಂದು ಅಂಕ ಹೇಗೆ ಬಂತು ಎಂದರೆ ಆಕೆ ಹೇಳುವುದು ಬೆಳಗ್ಗೆ 5 ಗಂಟೆಗೆ ಎದ್ದು ಓದುತ್ತಿದ್ದೆ. ಸಂಜೆ ಶಾಲೆಯಿಂದ ಬಂದ ನಂತರ ರಾತ್ರಿ 10ರ ವರೆಗೆ ಓದುತ್ತಿದ್ದೆ ಎಂದು. ಬೇರೆ ಯಾವುದೇ ಸ್ಪೆಷಲ್ ಕ್ಲಾಸ್, ಟ್ಯೂಷನ್ ಇಲ್ಲ! ಅಪ್ಪ -ಅಮ್ಮ ಕಲಿಸುತ್ತಾರೆ ಎಂದರೆ ನಿಶಿತಾ ತಂದೆ ತಾಯಿ ಓದಿದ್ದು 5 ತರಗತಿ ಮಾತ್ರ. ಮಗಳು ಅವಳೇ ಓದುತ್ತಾಳೆ ಎಂದು ಅಪಾರ ವಿಶ್ವಾಸ ಇವರದ್ದಾಗಿತ್ತು. ಇದೀಗ ಈ ವಿಶ್ವಾಸವನ್ನು ನಿಶಿತಾ ಉಳಿಸಿಕೊಂಡು ಶಾಲೆ ಮತ್ತು ಇಡೀ ಊರಿಗೆ ಕೀರ್ತಿ ತಂದಿದ್ದಾಳೆ.
ಭಜನಾ ಪಟು ನಿಶಿತಾ
ಈಕೆಗೆ ಭಜನೆ ಎಂದರೆ ಪಂಚಪ್ರಾಣ. ಪಾಲೆಂಜದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯೆ. ಭಜನೆಯಿಂದ ಮನಸ್ಸಿಗೆ ಏಕಾಗ್ರತೆ, ನೆಮ್ಮದಿ ಸಿಗುತ್ತಿತ್ತು ಎನ್ನುತಾಳೆ ಈಕೆ.
ಇಂಜಿನಿಯರ್ ಆಗುವ ಆಸೆ
ಕನ್ನಡ, ಸಮಾಜ ವಿಜ್ಞಾನದಲ್ಲಿ ಈಕೆ ಪೂರ್ಣ ಅಂಕ ಗಳಿಸಿದ್ದಾಳೆ. ಮುಂದೆ ವಿಜ್ಞಾನ ವಿಷಯವನ್ನು ಓದಿ ಇಂಜಿನಿಯರ್ ಆಗಬೇಕೆಂದು ಕನಸು ಹೊಂದಿದ್ದಾಳೆ. ಅರಸಿನಮಕ್ಕಿಯ ಈ ಪ್ರತಿಭೆ ನಿಶಿತಾಳನ್ನು ಅರಸಿನಮಕ್ಕಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಕುಂತಲಾ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಸುಧೀರ್ ಕುಮಾರ್ ಎಂ.ಎಸ್., ಪ್ರೇಮಚಂದ್ರ ಕೆ., ಶಕ್ತಿ ಕೇಂದ್ರ ಪ್ರಮುಖ್ ಗಣೇಶ್ ಹೊಸ್ತೋಟ, ಬೂತ್ ಅಧ್ಯಕ್ಷ ಜಯಪ್ರಸಾದ್ ಶೆಟ್ಟಿಗಾರ್, ಶ್ರೀಕಾಂತ್ ಕಾಂತ್ರೆಲ್, ಮುರಳೀಧರ ಶೆಟ್ಟಿಗಾರ್, ನವೀನ್ ರೈ, ಗಣೇಶ್ ಪಲಸ್ತಡ್ಕ, ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರ್ವಹಿಸಿದರು.
ಜಾಹೀರಾತು