ಸೌತಡ್ಕ ದೇವಳದ ಹಿಂಬದಿ ಗೇಟ್ ನಿರ್ಮಾಣ ವಿಚಾರ : ಬದಲಿ ವ್ಯವಸ್ಥೆಗೆ 45 ದಿನಗಳ ಕಾಲಾವಕಾಶ ಕೋರಿದ ವ್ಯವಸ್ಥಾಪನ ಮಂಡಳಿ

ಶೇರ್ ಮಾಡಿ

ನೇಸರ ಜೂ.01: ಸೌತಡ್ಕ ದೇವಸ್ಥಾನದ ವತಿಯಿಂದ ದೇವಸ್ಥಾನದ ಅನ್ನಛತ್ರದ ಬಳಿ ಸಾರ್ವಾಜನಿಕ ರಸ್ತೆಗೆ ಗೇಟ್ ಅಳವಡಿಸಿ ಸಾರ್ವಜನಿಕರಿಗೆ ಅನಾನುಕೂಲತೆ ಆಗಿರುವ ದೂರಿನ ಮೇರೆಗೆ ಕೊಕ್ಕಡ ಗ್ರಾಮ ಪಂಚಾಯಿತ್‌ನ ಸಾಮಾಜಿಕ ನ್ಯಾಯ ಸಮಿತಿ ಮೇ 31ರಂದು ದೇವಳದ ಗಣೇಶ ಕಲಾ ಮಂದಿರದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಒಮ್ಮತದ ತೀರ್ಮಾನ ಬಾರದ ಕಾರಣ ಮುಂದಿನ 45 ದಿನಗಳ ಒಳಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಸೌತಡ್ಕ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ತಿಳಿಸಿದರು.
ಏನಿದು ಪ್ರಕರಣ?
ದೇವಳದ ಭದ್ರತೆ ಹಾಗೂ ಭಕ್ತರ ಸುರಕ್ಷತೆ ಮತ್ತು ಅನ್ಯ ಚಟುವಟಿಕೆಗಳನ್ನು ಹತ್ತಿಕ್ಕುವ ದೃಷ್ಟಿಯಿಂದ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಸಾರ್ವಜನಿಕರಲ್ಲಿ ಅಭಿಪ್ರಾಯವನ್ನು ತಿಳಿಸದೇ ದೇವಸ್ಥಾನದ ಅನ್ನಛತ್ರದ ಬಳಿ ಸಾರ್ವಾಜನಿಕ ರಸ್ತೆಗೆ ಗೇಟ್ ನಿರ್ಮಿಸಿದ್ದರು. ಇದರಿಂದ ಸ್ಥಳೀಯ ಭಕ್ತರಿಗೆ ತೊಂದರೆ ಉಂಟಾಯಿತು. ನೂರು ವರ್ಷಗಳಿಗಿಂತ ಹೆಚ್ಚು ಕಾಲ ಕೊಕ್ಕಡ-ಸೌತಡ್ಕ -ಪಟ್ಟೂರು ರಸ್ತೆ ಇರುವ ಬಗ್ಗೆ ಸರಕಾರೀ ದಾಖಲೆಯಿದೆ. ಸಾರ್ವಜನಿಕ ರಸ್ತೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಅನಧಿಕೃತವಾಗಿ ಗೇಟ್ ನಿರ್ಮಿಸಿ ಈ ಪ್ರದೇಶದ ಜನರ ನಿತ್ಯ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವ ಊರಿನ ಜನರು ಸುತ್ತು ಬಳಸಿ ಸಂಚರಿಸುವಂತಾಗಿದೆ. ಇದರಿಂದ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಅನಧಿಕೃತವಾಗಿ ಅಳವಡಿಸಿರುವ ಗೇಟನ್ನು ತೆರವುಗೊಳಿಸಿ, ಗ್ರಾಮದ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸ್ಥಳೀಯರಾದ ಕುಡ್ತ್ಲಾಜೆ ಶ್ರೀಕೃಷ್ಣ ಭಟ್ಟರು ಹಾಗೂ ಆ ಗ್ರಾಮದ ಸಾರ್ವಜನಿಕರು ಆಗ್ರಹಿಸಿದರು.
40 ವರ್ಷಗಳ ಹಿಂದೆ ಪ್ರಶ್ನಾ ಚಿಂತನೆಯಲ್ಲಿ ಕಂಡದ್ದೇನು?
ಸುಮಾರು 40 ವರ್ಷಗಳ ಹಿಂದೆ ಮೊದಲ ಬಾರಿಗೆ ಹಾಗೂ ಸುಮಾರು 20 ವರ್ಷಗಳ ಮೊದಲು ಎರಡನೆಯ ಬಾರಿಗೆ ನಾಡಿನ ಸುಪ್ರಸಿದ್ಧ ಜ್ಯೋತಿಷಿಗಳ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯು ಇಲ್ಲಿ ನಡೆಯಿತು. ಆ ಸಂದರ್ಭದಲ್ಲಿ ದೇವರಿಗೆ ಮಾಡು ಹಾಗೂ ಆವರಣ ನಿರ್ಮಿಸುವಂತಿಲ್ಲ ದೇವರು ಬಂದ ಮುಕ್ತರಾಗಿರಿ ತಕ್ಕದ್ದು, ಎಲ್ಲ ಜನಾಂಗದ ಮನುಷ್ಯರು ಬಂದು ವಿಗ್ರಹ ಸ್ಪರ್ಶಿಸಿ ಭಾವಪೂಜೆ ಮಾಡುವಂತಿರಬೇಕು. ಹಸು, ನಾಯಿಯೇ ಮೊದಲಾದ ಎಲ್ಲ ವಿಧವಾದ ಪಶು, ಪಕ್ಷಿಗಳು ಮುಕ್ತವಾಗಿ ಈ ದೇವಾಲಯದಲ್ಲಿ ಸಂಚರಿಸುವಂತಿರಬೇಕು ಎಂದು ಅಂದು ಕಂಡುಬಂದಿತ್ತು.ಬಂದಮುಕ್ತ ಮಾಡಿದ್ದಲ್ಲಿ ಬಹುದೊಡ್ಡ ತೊಂದರೆ ಆಗುತ್ತದೆ ಎಂದು ದೈವಜ್ಞರು ತಿಳಿಸಿ ಎಚ್ಚರಿಸಿದ್ದರು. ಈಗ ಆ ಕಾಲ ಬಂದಿದೆ ಎಂದು ಗ್ರಾಮದ ಭಕ್ತರಲ್ಲಿ ಅಂತಕ, ಭಯದ ವಾತಾವರಣ ವ್ಯಕ್ತವಾಗುತ್ತಿದೆ
ಸ್ಥಳೀಯ ಭಕ್ತರ ನಿಲುವೇನು?
1966 ರಲ್ಲಿ ನಾರಾಯಣ ಪರ್ಲತ್ತಾಯರು ಗ್ರಾಮದ ಜನರ ಮನೆ-ಮನೆಗಳಿಗೆ ತೆರಳಿ ಭಿಕ್ಷೆ ಬೇಡಿ ಅಕ್ಕಿ ತಂದು ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಭಿಕ್ಷೆ ಸಿಗದ ದಿನ ದೇವರಿಗೆ ನೈವೇದ್ಯ ಇರುತ್ತಿರಲಿಲ್ಲ. ಇದನ್ನು ಕಂಡ ಕುಡ್ತ್ಲಾಜೆ ಗೋಪಾಲಕೃಷ್ಣ ಭಟ್ಟರು ನಾನು ಊಟ ಮಾಡುತ್ತಿರುವಷ್ಟು ದಿನ ದೇವರಿಗೆ ನೈವೇದ್ಯದ ವ್ಯವಸ್ಥೆ ಮಾಡುವುದು ನನ್ನ ಕರ್ತವ್ಯ ಎಂದು ಸಂಕಲ್ಪಿಸಿದರು. ಅಂದಿನಿಂದ ನಿರಂತರವಾಗಿ ದೇವರಿಗೆ ನೈವೇದ್ಯ ನಡೆಯುತ್ತಲೇ ಇದೆ. ಸುಮಾರು 18 ವರ್ಷಗಳ ಕಾಲ ದೇವಾಲಯದ ಮೊಕ್ತೇಸರರಾಗಿ ಗಣಪತಿಯ ಸೇವೆ ಸಲ್ಲಿಸಿದ್ದರು. ತಮ್ಮ ಸೇವಾವಧಿಯಲ್ಲಿ ಅಷ್ಟಮಂಗಲ ಪ್ರಶ್ನೆಯಿರಿಸಿ, ಅಲ್ಲಿ ಕಂಡುಬಂದಂತೆ ನೂತನ ಕಟ್ಟೆಯನ್ನು ಕಟ್ಟಿಸಿ ದೇವಾಲಯದ ಅಭಿವೃದ್ಧಿಗೆ ನಾಂದಿಯನ್ನು ಹಾಡಿದರು. ಅಂದಿನಿಂದ ಇಂದಿನವರೆಗೂ ದೇವಾಲಯವು ಪ್ರಸಿದ್ಧಿ ಪಡೆದು ಬೆಳಗುತ್ತಿದೆ. ಆದರೆ ನಿಷ್ಕಾಮ ಭಾವದಿಂದ ಸೇವೆ ಸಲ್ಲಿಸಿದ ಕುಡ್ತ್ಲಾಜೆ ಗೋಪಾಲಕೃಷ್ಣ ಭಟ್ಟರ ಮನೆಗೆ ಹೋಗುವ ಒಂದು ಭಾಗದ ಸಾರ್ವಜನಿಕ ರಸ್ತೆಯನ್ನು ದೇವಾಲಯದ ಆಡಳಿತ ಸಮಿತಿಯವರು ಅನಧಿಕೃತವಾಗಿ ಏಕಾಏಕಿ ಮುಚ್ಚಲಾಗಿದೆ. ಗಣಪತಿ ಸೇವಕ ಗೋಪಾಲಕೃಷ್ಣ ಭಟ್ಟರು ಮರಣ ಹೊಂದಿ ಒಂದು ವರ್ಷವಾಗುವ ಮೊದಲೇ ಸಮಿತಿಯವರ ಈ ನಿರ್ಣಯ ಊರಿನ ಭಕ್ತರಲ್ಲಿ ಅಸಮಾಧಾನವನ್ನುಂಟುಮಾಡಿದೆ.
ವ್ಯವಸ್ಥಾಪನಾ ಸಮಿತಿ ಏನು ಹೇಳುತ್ತಿದೆ?
ಗೇಟ್ ನಿರ್ಮಾಣ ಎಲ್ಲ ರೀತಿಯಲ್ಲಿ ಚಿಂತಿಸಿ ನಿರ್ಮಿಸಿದ್ದೇವೆ. ಮುಂದಿನ ನಿರ್ಣಯ ಗಣಪತಿ ಪರಿಹರಿಸಿಕೊಡುತ್ತಾನೆ ಎಂದರು.
ಈ ಸಂದರ್ಭ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ನ್ಯಾಯ ಸಮಿತಿ ಅಧ್ಯಕ್ಷೆ ಜಾನಕಿ ಹಾಗೂ ದೂರುದಾರರು, ತೊಂದರೆಗೊಳಗಾದ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!