ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ

ಶೇರ್ ಮಾಡಿ
 

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಜನಜನಿತವಾದುದು. ಯಾರು? ಎಲ್ಲಿ? ಯಾವಾಗ? ಹೇಗೆ? ಮಾತನಾಡಬೇಕು ಎಂದು ತಿಳಿದ ಮನಸ್ಥಿತಿ ಇರುವ ಜನರಿರುವಲ್ಲಿ ಜಗಳಕ್ಕೆ ಆಸ್ಪದವಿಲ್ಲ. ಹಾಗೆಯೇ ಆಹಾರವನ್ನು ಎಲ್ಲಿ? ಹೇಗೆ? ಯಾವಾಗ? ಎಷ್ಟು? ಸೇವಿಸಬೇಕು ಎಂದು ತಿಳಿದಿರುವ ಜನರ ಹತ್ತಿರ ರೋಗಗಳು ಸುಳಿಯುವುದಿಲ್ಲ. ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಜೂನ್ 7 ನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. 2018ರಿಂದ ಈ ದಿನವನ್ನು ಆಚರಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ವಿವಿಧ ವಯೋಮಾನದವರಲ್ಲಿ ಕಂಡುಬರುವ ಆಹಾರಕ್ಕೆ ಸಂಬಂಧಿಸಿದ ರೋಗಗಳನ್ನು ಗಮನಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರತೀವರ್ಷ ಹೊಸ ಹೊಸ ಧ್ಯೇಯವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಿದೆ.
ಪ್ರಸ್ತುತ ವರ್ಷ “ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ” ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಸುರಕ್ಷಿತ ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವತ್ತ ಗಮನ ಹರಿಸಬೇಕು ಎಂಬ ನಿಟ್ಟಿನಲ್ಲಿ ಆಚರಿಸಲ್ಪಡುತ್ತಿದೆ.

ಇಂದು ಆಹಾರಕ್ಕೆ ಕೊರತೆಯಿಲ್ಲ, ಆದರೆ ಸುರಕ್ಷಿತ ಆಹಾರಕ್ಕೆ ಕೊರತೆಯಿದೆ. ಆಧುನಿಕತೆಗೆ ತೆರೆದುಕೊಂಡಂತೆ ಮನುಷ್ಯನ ಜೀವನ ಶೈಲಿ ಬದಲಾಗಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಿದೆ.
ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟುಗಳು, ಕೊಬ್ಬುಗಳು ಮತ್ತು ಪ್ರೋಟೀನ್ ಗಳು ನಾವು ನಿತ್ಯ ಸೇವಿಸುವ ಆಹಾರದಲ್ಲಿ ಹಿತ- ಮಿತವಾಗಿರಬೇಕು. ಅದು ಅತಿಯಾದರೂ, ಕಡಿಮೆಯಾದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿಯೇ ಬೀರುತ್ತದೆ.
ವಿಶ್ವದಲ್ಲಿ ಆಹಾರದಿಂದ ಹರಡುವ ರೋಗಗಳಿಗೆ ಸುಮಾರು 600 ಮಿಲಿಯನ್ ಮಂದಿ ತುತ್ತಾಗುತ್ತಿದ್ದಾರೆ. ಹತ್ತರಲ್ಲಿ ಒಬ್ಬರು ಕಲುಷಿತ ಆಹಾರ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ವರ್ಷದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಐದು ವರ್ಷದ ಒಳಗಿನ ಮಕ್ಕಳು ಆಹಾರದಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸುರಕ್ಷಿತ ಆಹಾರವನ್ನು ಉತ್ಪಾದಿಸುವ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವ ಕಡೆ ಗಮನಹರಿಸಬೇಕು ಎನ್ನುವ ನಿಟ್ಟಿನಲ್ಲಿ ಜನರಿಗೆ ಜಾಗೃತಿಯನ್ನು ಮೂಡಿಸಲು ವಿಶ್ವ ಆಹಾರ ಸುರಕ್ಷತಾ ದಿನವನ್ನು ಜಗತಿನಾದ್ಯಂತ ಆಚರಿಸಲಾಗುತ್ತದೆ.

ಇಂದಿನ ಫ್ಯಾಶನ್ ಯುಗದಲ್ಲಿ ಯುವಜನತೆ ಫಾಸ್ಟ್ ಫುಡ್ ಗಳಿಗೆ ಮಾರುಹೋಗುವುದಲ್ಲದೇ ತಯಾರಿಸುವ ಪ್ರತೀ ಆಹಾರದಲ್ಲಿ ಕೆಮಿಕಲ್ ಗಳನ್ನು ಬಳಸಿ ಜನತೆಗೆ ನೀಡುತ್ತಿರುವುದು ವಿಪರ್ಯಾಸವೇ ಸರಿ‌. ಅಷ್ಟು ಮಾತ್ರವಲ್ಲದೇ ಅಸಮರ್ಪಕ ಅಡುಗೆ ಕ್ರಮ, ಬಳಸಲು ಯೋಗ್ಯವಲ್ಲದ ಆಹಾರದ ಬಣ್ಣಗಳನ್ನು ಬಳಸುವುದು, ಆಹಾರ ಶೇಖರಣೆಯ ಅಸಮರ್ಪಕತೆಯಿಂದಾಗಿ ಆಹಾರ ಕಲುಷಿತಗೊಂಡು ಕಾಯಿಲೆ ಹರಡುವ ಅಪಾಯವು ಹೆಚ್ಚಿರುತ್ತದೆ.

ಆಧುನಿಕ ಯುಗಕ್ಕೆ ತೆರೆದುಕೊಂಡ ಮನುಷ್ಯ ತನ್ನ ಕೆಲಸ ಕಾರ್ಯಗಳ ಮಧ್ಯೆ ತನ್ನ ಆಹಾರ ಪದ್ಧತಿಯಲ್ಲಿ ಎಡವುತ್ತಿದ್ದಾನೆ. ಹೊತ್ತು-  ಗೊತ್ತೂ ಇಲ್ಲದೆ ಸಿಕ್ಕಸಿಕ್ಕ ಆಹಾರವನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಕುಂದುವುದರೊಂದಿಗೆ ತನ್ನ ಆರೋಗ್ಯ ಹದಗೆಡುವಿಕೆಗೆ ತಾನೇ ಕಾರಣಕರ್ತನಾಗುತ್ತಿದ್ದಾನೆ.

ಇಂದಿನ ತಲೆಮಾರು ಫಾಸ್ಟ್ ಫುಡ್ ಗೆ ಮಾರು ಹೋಗಿ ವಾರಾಂತ್ಯದಲ್ಲಿ ಮಜವಾಗಿ ಕಳೆಯುವುದೆಂದರೆ ಹೋಟೆಲ್ ಇಲ್ಲವೇ ರೆಸ್ಟೋರೆಂಟ್ ಗಳಿಗೆ ಹೋಗಿ ಪಿಜ್ಜಾ, ಬರ್ಗರ್, ನೂಡಲ್ಸ್,  ಮಸಾಲಾಪುರಿ, ಪಾನಿಪುರಿ ಚೈನಿಸ್ ಆಹಾರಗಳು ಇವೇ ಮೊದಲಾದ ಫಾಸ್ಟ್ ಫುಡ್ ಗಳನ್ನು ಕಬಳಿಸುವುದು ಎಂದಾಗಿದೆ. ಬಾಯಿಗೆ ರುಚಿಯನ್ನು ಉಣಬಡಿಸುವ ಈ ಸಿದ್ಧ ಆಹಾರಗಳು ಜನರ ಜೀವವನ್ನು ತಿನ್ನುವ ಸ್ಲೋ ಪಾಯ್ಸನ್ ಗಳು.  ತ್ವರಿತವಾಗಿ ತಯಾರು ಮಾಡುವ ಈ ಆಹಾರಗಳು ಹೊಟ್ಟೆ ತಣಿಸುವ ಕೆಲಸವನ್ನು ಮಾಡದೆ ಜನರ ಜೀವವನ್ನೇ ನಿಧಾನವಾಗಿ ನುಂಗುವ ರಾಕ್ಷಸಿ ಪದಾರ್ಥಗಳಾಗಿವೆ. ಒಮ್ಮೆ ತಿಂದರೆ ಇನ್ನಷ್ಟು ತಿನ್ನಬೇಕೆನ್ನುವ ಬಯಕೆಯನ್ನು ಈ ಆಹಾರ ಪದಾರ್ಥಗಳು ಹುಟ್ಟುಹಾಕುತ್ತವೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಫಾಸ್ಟ್ ಫುಡ್ ಚಟಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಆದರೆ ಆರೋಗ್ಯದ ಮೇಲೆ ಫಾಸ್ಟ್ ಫುಡ್ ಬೀರುವಷ್ಟು ಅಪಾಯಕಾರಿ ಅಂಶಗಳು ಬೇರೊಂದಿಲ್ಲ ಎಂದು ವೈದ್ಯ ಲೋಕವೇ ಸಾರಿ ಹೇಳಿದೆ. ಇದರ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳು ಅಷ್ಟಿಷ್ಟಲ್ಲ--

ಸ್ಥೂಲಕಾಯ, ಹೃದಯರೋಗ, ಮಧುಮೇಹ, ಸಾಮಾನ್ಯ ಕರುಳು ಹುಣ್ಣು, ಹಸಿವಿನ ಕೊರತೆ, ಸಾಕಷ್ಟು ನ್ಯೂಟ್ರಿನ್ ಗಳ ಕೊರತೆ, ಒತ್ತಡ ಮಾತ್ರವಲ್ಲದೇ ಹಣ ಪೋಲು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು, ಕುಟುಂಬದವರೆಲ್ಲಾ ಒಂದಾಗಿ ಆಹಾರ ಸೇವಿಸುವ ವಾತಾವರಣ ಇಲ್ಲದಿರುವುದು ಇತ್ಯಾದಿ……

ಇದನ್ನೆಲ್ಲ ನಿವಾರಣೆ ಮಾಡುವ ದೃಷ್ಟಿಕೋನದಿಂದ ವಿಶ್ವ ಸಂಸ್ಥೆ ಕಳೆದ 5 ವರ್ಷದಿಂದ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುತ್ತಿದ್ದು ಆರೋಗ್ಯದ ಗುಟ್ಟು ಆಹಾರದಲ್ಲಿ ಎನ್ನುವಂತೆ ಸುಶಿಕ್ಷಿತ ಆಹಾರ ಸೇವನೆ, ರಾಸಾಯನಿಕ ಮುಕ್ತ ಆಹಾರ ಹಾಗೂ ಸಮತೋಲನ ಆಹಾರ ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಆಯುಷ್ಯವನ್ನು ಸಹಜವಾಗಿ ವೃದ್ಧಿಸುತ್ತದೆ.

🖋️.ಡಾ. ಅನುರಾಧಾ ಕುರುಂಜಿ

Leave a Reply

error: Content is protected !!