ನೇಸರ ಜೂ.20: ಕೊಕ್ಕಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಂಗೇರಿ ಮತ್ತು ಓಣಿತ್ತಾರು ಪ್ರದೇಶಗಳಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆ ಹೆಸರು ಹೇಳುತ್ತಾ ರಾಜಕೀಯ ವ್ಯಕ್ತಿಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವ ವಿಚಾರ ಭಾನುವಾರ(ಜೂ.19) ಬೆಳಕಿಗೆ ಬಂದಿದೆ. ಓಣಿತ್ತಾರಿನ ಸಂಜೀವ ನಾಯ್ಕ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ, ತಾವು ಬೆಂಗಳೂರಿನ ದ್ರುವ ರಿಸರ್ಚ್ ಸಂಸ್ಥೆಯ ದೀಪ ಹಾಗೂ ನೀಲೇಶ್ ಎಂಬುವವರಾಗಿದ್ದು, ಸಂಸ್ಥೆಯೊಂದರಿಂದ ಸರ್ವೆ ಮಾಡಲು ಬಂದಿದ್ದು ನಿಮಗೆ ಯಾವ ರಾಜಕೀಯ ಪಕ್ಷದ ಒಲವಿದೆ? ನೆಚ್ಚಿನ ರಾಜಕೀಯ ನಾಯಕ ಯಾರು ? ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸವಲತ್ತಗಳನ್ನು ಬಳಸಿ ಕೊಂಡಿರುತ್ತೀರೇ ? ನಿಮ್ಮ ಮತ ಯಾವ ಪಕ್ಷಕ್ಕೆ ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿ ಗ್ರಾಮಸ್ಥರಿಂದ ದೂರವಾಣಿ ನಂಬರನ್ನು ಪಡೆಯುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಬಂದು ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ:
ಈ ಸರ್ವೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಗ್ರಾಮಸ್ಥರು ಇದಕ್ಕೆ ಉತ್ತರಿಸುವ ಅಗತ್ಯವಿಲ್ಲ ಎಂದರು. ಅಲ್ಲದೆ ಸರ್ವೆಗೆ ಬಂದಿರುವ ವ್ಯಕ್ತಿಗಳಲ್ಲಿ ದೂರವಾಣಿ ಕರೆಗಳ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡರು. ಸರ್ವೆ ಕಾರ್ಯ ನಡೆಸುವ ವ್ಯಕ್ತಿಗಳು ಸೋಮವಾರ(ಜೂ.20)ದಂದು ಪಂಚಾಯತಿಗೆ ಬಂದು ಅಧ್ಯಕ್ಷರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದು ತಿಳಿಸಿರುವುದಾಗಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ರೀತಿ ಯಾವುದೇ ಅಪರಿಚಿತರು ಮನೆಗಳಿಗೆ ಬಂದರೆ ಗ್ರಾಮಸ್ಥರು ಪಂಚಾಯತ್ ಅನುಮತಿ ಪತ್ರ ಕೇಳಲಿ. ಬಂದವರಲ್ಲಿ ಯಾವುದೇ ಅನುಮತಿ ಪತ್ರಗಳಿಲ್ಲದಿದ್ದರೆ ಅವರಲ್ಲಿ ವ್ಯವಹಾರ ಮಾಡದೆ ಕೂಡಲೇ ಪಂಚಾಯತ್ ಅಧ್ಯಕ್ಷರು. ಅಭಿವೃದ್ದಿ ಅಧಿಕಾರಿ, ಅಥವಾ ಸ್ಥಳೀಯ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.