ಕಡಬ :ಆಲಂಕಾರಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ; ಲಂಚ ಕೇಳುವ ಅಧಿಕಾರಿಗಳು ನೇರ ಮನೆಗೆ: ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ

ಶೇರ್ ಮಾಡಿ

ನೇಸರ ಜೂ.18: ಕಾನೆ ಬಾನೆ ಕುಮ್ಕಿ ಹಕ್ಕು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ, ಇದಕ್ಕಾಗಿ ಉಪ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದಲ್ಲಿ ಉಪ ಸಮಿತಿ ಸಭೆ ಸೇರಿ ಸರಕಾರದ ಆದೇಶವನ್ನು ಜಾರಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು, ಮೀನುಗಾರಿಕೆ, ಒಳನಾಡು, ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಶನಿವಾರ ಆಲಂಕಾರು ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎನ್ನುವ ಸರಕಾರ ಜನರ ಬಳಿಗೆ ಹೋಗುವ ಕಾರ್ಯಕ್ರಮದಿಂದಾಗಿ ಸರಕಾರದ ಯೋಜನೆಗಳು, ಕಾರ್ಯಕ್ರಮಗಳು ಜನರ ಮನೆ ಬಾಗಲಿಗೆ ಮುಟ್ಟುತ್ತಿದೆ, ಇದು ಇಲಾಖೆಗಳ ಕಾರ್ಯಕ್ರಮ ಅಲ್ಲ, ಜನರ ಕಾರ್ಯಕ್ರಮ ಎಂದು ಸಚಿವರು ಬಣ್ಣಿಸಿದರು.

ಲಂಚ ಕೇಳುವ ಅಧಿಕಾರಿಗಳು ನೇರ ಮನೆಗೆ: ಡಿಸಿ
ಅಧಿಕಾರಿಗಳು ಭಿಕ್ಷುಕರ ಹಾಗೇ ಜನರಲ್ಲಿ ಬೇಡುವ ಅವಶ್ಯಕತೆಯಿಲ್ಲ. ಪ್ರತೀ ಕೆಲಸಕ್ಕು ಸಾರ್ವಜನಿಕರನ್ನು ಇಲಾಖಾಧಿಕಾರಿಗಳ ಬಳಿ ಕಳಿಸಿ ಕಿರುಕುಳ ನೀಡಬಾರದು, ಒಂದು ಅರ್ಜಿ ಬಂದ ಬಳಿಕ ಅದರ ಜವಾಬ್ದಾರಿ ಅಧಿಕಾರಿಗಳದ್ದು, ಅದನ್ನು ಬಿಟ್ಟು ಅರ್ಜಿದಾರರನ್ನೇ ಪ್ರತೀ ಹಂತದ ಕೆಲಸಕ್ಕೆ ಕಳುಹಿಸುವುದು ಸರಿಯಲ್ಲ ಎಂದು ಖಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ ಯಾರಾದರೂ ಅಧಿಕಾರಿಗಳು ಕಡತ ವಿಲೇವಾರಿಗ ಸಾರ್ವಜನಿಕರನ್ನು ಸತಾಯಿಸಿ ಹಣಕ್ಕೆ ಪೀಡಿಸಿದರೆ ಸಾರ್ವಜನಿಕರು ನನ್ನ ಗಮನಕ್ಕ ತನ್ನಿ, ಅಂತಹ ಅಧಿಕಾರಿಗಳನ್ನು ನೇರವಾಗಿ ಮನೆಗೆ ಕಳುಹಿಸುತ್ತೇನೆ ಎಂದು ಸಭೆಯಲ್ಲಿ ಗುಡುಗಿದರು. ಪ್ಲಾಟಿಂಗ್ ವಿಚಾರಕ್ಕೆ ಸಂಬoದಿಸಿದ ಕಡತವೊಂದು ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪ್ರವೀಣ್ ಕುಮಾರ್ ಕೆಡೆಂಜಿ ಅವರು ಡಿಸಿ ಯವರ ಗಮನಕ್ಕೆ ತಂದಾಗ ಗ್ರಾಮಕರಣಿಕರಿಂದ ಹಿಡಿದು ಕಂದಾಯ, ಭೂಮಾಪನಾ ಇಲಾಖಾ ಅಧಿಕಾರಿಗಳನ್ನು ವೇದಿಕೆಗೆ ಕರೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸಂಜೆಯ ಒಳಗೆ ಕಡತ ನನ್ನ ಮುಂದಿಡಬೇಕು ಎಂದು ತಾಕೀತು ಮಾಡಿದರು.
ಆಲಂಕಾರಿನಲ್ಲಿ ಎಂಡೋ ಸಂತ್ರಸ್ತರಿಗಾಗಿ ಶಾಶ್ವತ ಪುನರ್‌ವಸತಿ ಕೇಂದ್ರವನ್ನು ತೆರೆಯಲು ಸರಕಾರದಿಂದ ಮಂಜೂರಾತಿ ದೊರೆತು ಈಗಾಗಲೇ ಜಾಗ ಗುರುತು ಮಾಡಲಾಗಿದೆ, ಪಹಣಿ ಕೂಡಾ ಆಗಿದೆ ಆದರೆ ಕೇಂದ್ರದ ಅನುಷ್ಠಾನ ಇನ್ನೂ ಆಗಿಲ್ಲ. ಆದ್ದರಿಂದ ತಕ್ಷಣ ಕೇಂದ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಹಾಸಿಗೆ ಹಿಡಿದಿರುವ ಎಂಡೋ ಸಂತ್ರಸ್ತರನ್ನು ಅವರ ತಾಯಂದಿರು ಆರೈಕೆ ಮಾಡುತ್ತಿದ್ದು ಅಂತಹ ತಾಯಂದಿರಿಗೆ ಮಾಶಾಸನ ಕೊಡಿಸಬೇಕು ಎಂದು ಎಂಡೋ ವಿರೋಧಿ ಹೋರಾಟಗಾರ ಪೀರ್ ಮಹಮ್ಮದ್ ಸಾಹೇಬ್ ಮನವಿ ಮಾಡಿದರು. ಈ ಬಗ್ಗೆ ಉತ್ತರಿಸಿದ ಡಿಸಿ ಯವರು ಆಲಂಕಾರು ಹಾಗೂ ಬೆಳ್ತಂಗಡಿಯಲ್ಲಿ ಶಾಶ್ವತ ಪುನರ್‌ವಸತಿ ಕೇಂದ್ರ ನಿರ್ಮಾಣದ ಬೇಡಿಕೆ ಇದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿ ಎಂಡೋ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಬoಧಪಟ್ಟ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು 94 ಸಿಯಲ್ಲಿ ಹಕ್ಕು ಪತ್ರ ನೀಡಲು ಸತಾಯಿಸುತ್ತಾರೆ ಎಂದು ಪದ್ಮಾವತಿ ಎಂಬ ಮಹಿಳೆ ದೂರಿದರು. ಇದಕ್ಕೆ ಉತ್ತರಸಿದ ಜಿಲ್ಲಾಧಿಕಾರಿಯವರು 94 ಸಿಯಲ್ಲಿ ಅರ್ಜಿ ನೀಡಿದವರಲ್ಲಿ ಹೆಚ್ಚಿನವು ಬೋಗಸ್ ಆಗಿವೆ, ಆದರೆ ಅರ್ಹರಿಗೆ ಯಾವುದೇ ತೊಂದರೆಯಾಗದoತೆ ನೋಡಿಕೊಳ್ಳಬೇಕು, ಬಡವರ ಕೆಲಸಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ಮಾಡಿಕೊಡಬೇಕು, ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು, ಸಮಸ್ಯೆಗಳನ್ನು ಅಪರ ಜಿಲ್ಲಾಧಿಕಾರಿಯವರಲ್ಲಿ ತಿಳಿಸಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ದಲಿತ ಮಹಿಳೆಯೊಬ್ಬರು ನಿವೇಶನ ದೊರೆಯದ ಬಗ್ಗೆ ದೂರಿಕೊಂಡಾಗ ಐದು ಜನ ದಲಿತ ಕುಟುಂಬಕ್ಕೆ ಸರಕಾರದ ಹಣದಲ್ಲಿ ಭೂ ಖರೀದಿಸಿ ಕೊಡುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ವಸತಿ ನಿವೇಶನ ದೊರೆಯದ ಬಗ್ಗೆ ಆಲಂಕಾರಿನ ಶಾಂಭವಿ ಎನ್ನುವವರು ನೀಡಿ ದೂರಿಗೆ ಇನ್ನು ಆರು ತಿಂಗಳ ಒಳಗೆ ನಿವೇಶನ ಒದಗಿಸಕೊಡುವ ಭರವಸೆ ದೊರೆಯಿತು.
ಅಡಕೆಗೆ ಹಳದಿ ರೋಗದ ಬಗ್ಗೆ ಶಿವಣ್ಣ ಗೌಡ ಕಕ್ವೆ ಗಮನ ಸೆಳೆದಾಗ ಹಳದಿ ರೋಗ ಬಂದ ಮರಗಳನ್ನು ಕಿತ್ತು ಬೇರೆ ಗಿಡಗಳ ನಾಟಿ ಮಾಡಲು ಸರಕಾರ ಪರಿಹಾರವಾಗಿ 25 ಕೋಟಿ ರೂ ನೀಡಲು ಹಣ ಕಾದಿರಿಸಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಅದು ಬಾಕಿಯಾಗಿತ್ತು. ಈ ಪೈಕಿ ಆರು ಕೋಟಿ ರೂ ಬಿಡುಗಡೆಯಾಗಿದ್ದು ಅರ್ಹರಿಗ ವಿತರಿಸುದಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭೂಪರಿವರ್ತನೆಯಾದ ಜಾಗಕ್ಕ 9/11 ನೀಡಲು ಪ್ರಾಧಿಕಾರಗಳಿಗೆ ಅವಕಾಶ ನೀಡಿರುವುದನ್ನು ಸರಕಾರ ವಾಪಾಸ್ಸು ಪಡೆದರೂ, ಆ ಆದೇಶ ಸ್ಥಳೀಯಾಡಳಿತಗಳಿಗೆ ಇನ್ನೂ ಬಂದಿಲ್ಲ ಎಂದು ಶಿವಣ್ಣ ಗೌಡ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದರು. ಆಲಂಕಾರಿನಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ಕಾದಿರಿಸಬೇಕು, ಇಲ್ಲಿ ಯುವಕಮಂಡಲಕ್ಕೆ ನೀಡಿರುವ ಜಾಗದಲ್ಲಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ, ಯುವಕ ಮಂಡಲ ಕೂಡಾ ಸಕ್ರೀಯವಾಗಿಲ್ಲ, ಆದ್ದರಿಂದ ಆ ಜಾಗವನ್ನು ಅಂಬೇಡ್ಕರ್ ಭವನಕ್ಕೆ ನೀಡಬೇಕು ಎಂದು ಅಗ್ರಹಿಸಲಾಯಿತು. ಪರಿಶೀಲಿಸಿ ಆದೇಶ ನೀಡಲಾಗುವುದು ಎಂದು ಡಿಸಿ ಹೇಳಿದರು. ಆಲಂಕಾರಿನ ನಡುಗುಡ್ಡೆಯಲ್ಲಿ ಪಂಚಾಯಿತಿ ನಿರ್ಮಾಣ ಮಾಡಿರುವ ಪ್ರಯಾಣಿಕರ ತಂಗುದಾನದ ಪಂಚಾoಗವನ್ನು ಖಾಸಗಿ ವ್ಯಕ್ತಿಯೊಬ್ಬರು ಹಾಳುಗೆಡವಿದ್ದಾರೆ ಎನ್ನುವ ದೂರು ಕೇಳಿ ಬಂತು. ತಕ್ಷಣ ಈ ಬಗ್ಗೆ ಕ್ರಮ ಜರಗಿಸುವಂತೆ ಸಂಬoಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಆಲಂಕಾರಿನಲ್ಲಿ ಹಾಗೂ ಬಲ್ಯ ಗ್ರಾಮದಲ್ಲಿ ಖಾಯಂಗ್ರಾಮಕರಣಿಕರ ನೇಮಕವಾಗಬೇಕು, ಆಲಂಕಾರನ್ನು ಹೋಬಳಿ ಮಾಡಬೇಕು, 110 ಕೆವಿ ವಿದ್ಯುತ್ ಸಬ್‌ಸ್ಟೇಶನ್ ಶೀಘ್ರ ಅನುಷ್ಠಾನವಾಗಬೇಕು ಮುಂತಾದ ಹತ್ತು ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಎಲ್ಲಾ ಅಹವಾಲುಗಳನ್ನು ಸಮಧಾನದಿಂದ ಆಲಿಸಿದ ಜಿಲ್ಲಾಧಿಕಾರಿಯವರು ಸಮರ್ಪಕ ಉತ್ತರ ನೀಡಿ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಪ್ರತಿ ಹಂತದಲ್ಲೂ ಅಧಿಕಾರಿಗಳ ವೈಫಲ್ಯಕ್ಕೆ ಚಾಟಿ ಬೀಸುತ್ತಾ, ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ಸಮಸ್ಯೆಗಳನ್ನು ಪರಿಹರಿಸಿದರು. ಕೆಲವು ಸಮಸ್ಯೆಗಳಿದ್ದ ಸ್ಥಳಕ್ಕೆ ಖುದ್ದು ಬೇಟಿ ನೀಡಿ ಗಮನ ಸೆಳೆದರು. ಸಭೆಯ ಆರಂಭದಲ್ಲಿ ಆಲಂಕಾರು ಗ್ರಾ.ಪಂ ಕಛೇರಿಯಿಂದ ಸಭಾಭವನ ತನಕ ಚೆಂಡೆ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಜಿಲ್ಲಾಧಿಕಾರಿಯವರನ್ನು ಕರೆ ತರಲಾಯಿತು. ತಡ ರಾತ್ರಿ ತನಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅರ್ಜಿಗಳ ವಿಲೇವಾರಿ ಮಾಡಿದರು.

ವೇದಿಕೆಯಲ್ಲಿ ಡಿಡಿಎಲ್ ನಿರಂಜನ್, ಕಡಬ ತಾಲುಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ, ಆಲಂಕಾರು ಗ್ರಾ. ಪಂ. ಅಧ್ಯಕ್ಷ ಸದಾನಂದ ಆಚಾರ್ಯ, ಉಪಾಧ್ಯಕ್ಷೆ ರೂಪಶ್ರೀ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಪ್ರಸ್ತಾವನೆಗೈದರು, ಕಡಬ ತಹಶಿಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಉಪತಹತಹಶಿಲ್ದಾರ್ ಗಳಾದ ಮನೋಹರ ಕೆ.ಟಿ ಹಾಗೂ ಗೋಪಾಲ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮೂಲೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಸರಕಾರದ ವಿವಿಧ ಯೋಜನಗಳ 120 ಫಲಾನುಭವಿಗಳಿಗೆ ಹಕ್ಕು ಪತ್ರ, ಪರಿಹಾರ ಧನ ವಿತರಿಸಲಾಯಿತು. ಸಿಆರ್‌ಪಿ ಪ್ರಕಾಶ್ ಬಿ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!