ನೇಸರ ಜೂ.20: ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಉದ್ಯೋಗ,ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಸರಣಿ ತರಬೇತಿಗಳನ್ನು ಜೆಸಿಐ ಆಲಂಕಾರು, ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದೆ. ಈ ತರಬೇತಿಗಳ ಉದ್ಘಾಟನೆಯುನ್ನು ಜೆಸಿಐ ವಲಯ 15ರ ಅಧ್ಯಕ್ಷ ಜೆಸಿ ಸೆನೆಟರ್ ರೋಯನ್ ಉದಯ ಕ್ರಾಸ್ತರವರು ದೀಪ ಬೆಳಗಿ ನಡೆಸಿಕೊಟ್ಟರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಯುವಜನತೆಗೆ ಸರಿಯಾದ ಮಾರ್ಗದರ್ಶನ, ತರಬೇತಿ ನೀಡಿದರೆ, ಅವರು ಉದ್ಯೋಗದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಲ್ಲದೆ, ಸಮಾಜದ ಮಿಡಿತಕ್ಕೆ ಪೂರಕವಾಗಿ ಸೇವೆಯನ್ನು ಮಾಡಲು ಶಕ್ತರಾಗುತ್ತಾರೆ. ಹಾಗಾಗಿ ಒಂದು ವಾರದ ಕಾಲ ನಡೆಯುವ ಈ ತರಬೇತಿಯು ಯಶಸ್ವಿಯಾಗಲಿ, ಇದರ ಪರಿಣಾಮ ವಿದ್ಯಾರ್ಥಿಗಳಲ್ಲಿ ಕಾಣುವಂತಾಗಲಿ” ಎಂದು ಶುಭಹಾರೈಸಿದರು.
ಸಮಾರಂಭದ ಮುಖ್ಯ ಅತಿಥಿಯಾದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಯವರು ಮಾತನಾಡುತ್ತಾ “ಜೆಸಿಐ ಸಂಘಟನೆಯು ಯುವಜನರ ಸಬಲೀಕರಣಮಾಡುವ ಸಂಘಟನೆಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಸಂಘಟನೆ. ಇದರ ತರಬೇತಿಗಳು ಇಂದಿನ ಯುಗಕ್ಕೆ ಬಹಳ ಪ್ರಸ್ತುತವಾಗಿದೆ. ಜೆಸಿಐಯ ಜೀವಾಳವೇ ತರಬೇತಿಗಳು. ಈ ಸಂಸ್ಥೆಯಲ್ಲಿ ನಡೆಯುವ ಈ ತರಬೇತಿಗಳು ಅತ್ಯುತ್ತಮವಾಗಿ ಮೂಡಿಬರಲಿ” ಎಂದು ಹಿತನುಡಿಗಳನ್ನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣರಾಜ ಕುಂಬ್ಳೆಯವರು ಈ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಆಲಂಕಾರು ಘಟಕದ ಅಧ್ಯಕ್ಷರಾದ ಜೆಸಿ ಅಜಿತ್ ರೈಯವರು ಮಾತನಾಡಿ, ತರಬೇತಿಯ ವಿವರವನ್ನು ಸಭಿಕರಿಗೆ ತಿಳಿಸಿ, ಒಂದು ವಾರದಕಾಲ ನಡೆಯುವ ಈ ತರಬೇತಿಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಜೆಸಿಐ ವಲಯ 15ರ ಅಧಿಕಾರಿ ಜೆಸಿ ಮೋಹನ್ ನಕ್ರೆ, ಪೂರ್ವವಲಯ ಉಪಾಧ್ಯಕ್ಷ ಜೆಸಿ ಪ್ರದೀಪ್ ಬಾಕಿಲ, ಲೇಡಿ ಜೆಸಿ ಅಧ್ಯಕ್ಷೆ ಮಮತಾ ಅಂಬರಾಜೆ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಘಟಕದ ಪೂರ್ವಾಧ್ಯಕ್ಷ ತೋಷಿತ್ ರೈ, ಸದಸ್ಯರಾದ ಅಜಿತ್ ಪಾಲೇರಿ ಮತ್ತಿತರರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಜೆಸಿ ಚೇತನ್ ಎಂ ಧನ್ಯವಾದ ಸಮರ್ಪಿಸಿದರು. ಜೆಸಿ ಯೋಗೀಶ್ ಜೆಸಿವಾಣಿ ವಾಚಿಸಿದರು.